Connect with us

Latest

ವಿಶ್ವದ ಅತೀ ಉದ್ದದ ಅಟಲ್ ಸುರಂಗ ಹೆದ್ದಾರಿ ಸಿದ್ಧ- ಶೀಘ್ರವೇ ಉದ್ಘಾಟನೆ

Published

on

ಶಿಮ್ಲಾ: ವಿಶ್ವದ ಅತೀ ಎತ್ತರ ಪ್ರದೇಶದಲ್ಲಿ‌ ನಿರ್ಮಾಣಗೊಂಡ 8.8 ಕಿ.ಮೀ ಉದ್ದದ ಸುರಂಗ ಮಾರ್ಗ ಸಂಚಾರಕ್ಕೆ ಸಿದ್ಧವಾಗಿದೆ. ಹಿಮಾಚಲ ಪ್ರದೇಶದ ಮನಾಲಿಯಿಂದ ಲಡಾಖ್‍ನ ಲೇಹ್‍ಗೆ ಅಟಲ್ ಟನಲ್ ಸಂಪರ್ಕ ಕಲ್ಪಿಸಲಿದ್ದು ಈ ತಿಂಗಳ ಅಂತ್ಯದಲ್ಲಿ ಪ್ರಧಾನಿ ಮೋದಿ ಸುರಂಗ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.

ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ಈ ಟನಲ್ ನಿರ್ಮಾಣವಾಗಿದ್ದು, 10 ವರ್ಷಗಳ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

ಸುಮಾರು 3,200 ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗಿದ್ದು, 8.8 ಕಿಮೀ ಉದ್ಧವಿದೆ. ಈ ಟನಲ್‍ನ ಮಾರ್ಗದಲ್ಲಿ ಪ್ರತಿ 60 ಮೀಟರ್ ಅಂತರದಲ್ಲಿ ಸಿಸಿಟಿವಿ ಹಾಗೂ ಪ್ರತಿ 500 ಮೀಟರ್ ಅಂತರದಲ್ಲಿ ತುರ್ತು ನಿರ್ಗಮನ ಮಾರ್ಗಗಳನ್ನು ಹೊಂದಿದೆ. ಟನಲ್ ನಿರ್ಮಾಣದಿಂದ ಲೇಹ್ ಮತ್ತು ಮನಾಲಿಯ ಅಂತರವನ್ನು 46 ಕಿಮೀ ಕಡಿಮೆ ಮಾಡಲಾಗಿದ್ದು, ಪ್ರಯಾಣದ ಅವಧಿ 4 ಗಂಟೆ ಕಡಿಮೆಯಾಗಿದೆ ಎಂದು ಸುರಂಗ ನಿರ್ಮಾಣದ ಮುಖ್ಯ ಎಂಜಿನಿಯರ್ ಕೆಪಿ ಪುರುಷೋತ್ತಮನ್‌ ಮಾಹಿತಿ ನೀಡಿದ್ದಾರೆ.

ಯಾವುದೇ ಬೆಂಕಿ ಅವಘಡದ ಸಂಭವಿಸಿದಲ್ಲಿ ನಿಯಂತ್ರಣ ಮಾಡಲು ಸುರಂಗ ಮಾರ್ಗದಲ್ಲಿ ಅಗ್ನಿಶಾಮಕ ಹೈಡ್ರಾಂಟ್‍ಗಳನ್ನು ಅಳಡಿಸಲಾಗಿದೆ. ನಿರ್ಮಾಣದ ಹಂತದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದು, ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಿದ್ದ ಕಾರಣ ಯೋಜನೆ ಪೂರ್ಣಗೊಂಡಿದೆ. ಸುರಂಗದ ಅಗಲ 10.5 ಮೀಟರ್ ಆಗಿದ್ದು, ಎರಡೂ ಮಾರ್ಗದಲ್ಲಿ 1 ಮೀಟರ್ ಅಗಲದ ಫುಟ್‍ಪಾತ್ ನಿರ್ಮಿಸಲಾಗಿದೆ ಎಂದು ಪುರುಷೋತ್ತಮನ್‌ ವಿವರಿಸಿದ್ದಾರೆ.

ಈ ಸುರಂಗ ಮಾರ್ಗಕ್ಕೆ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇರಿ ಅವರ ಹೆಸರಿಡಲಾಗಿದ್ದು, ಅಟಲ್ ರೋಹ್ಟಾಂಗ್ ಟನಲ್ ಎಂದು ಕರೆಯಲಾಗುತ್ತದೆ. 2010 ಜೂನ್ 28 ರಂದು ಟನಲ್ ನಿರ್ಮಾಣದ ಶಂಕು ಸ್ಥಾಪನೆ ಮಾಡಲಾಗಿದ್ದು, ಆ ವೇಳೆ 6 ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಬಾರ್ಡರ್ ರೋಡ್ ಆರ್ಗನೈಜೇಷನ್ ಈ ಸುರಂಗವನ್ನು ನಿರ್ಮಾಣ ಮಾಡಿದೆ. ಸುರಂಗ ಮಾರ್ಗದಲ್ಲಿ ಯಾವುದೇ ವಾಹನವಾದರೂ ಗಂಟೆಗೆ 80 ಕಿಮೀ ವೇಗದಲ್ಲಿ ಪ್ರಯಾಣಿಸಲು ಅವಕಾಶವಿದೆ. ಲಡಾಖ್‍ನಲ್ಲಿ ನಿಯೋಜಿಸಿರುವ ಭಾರತ ಸೈನಿಕರಿಗೆ ಈ ಸುರಂಗ ಮಾರ್ಗ ಹೆಚ್ಚು ಉಪಯೋಗವಾಗಲಿದೆ. ಚಳಿಗಾಲದಲ್ಲಿ ಈ ಮಾರ್ಗದ ಮೂಲಕದ ಗಡಿಯಲ್ಲಿರುವ ಸೈನಿಕರಿಗೆ ಅಗತ್ಯವಿರುವ ವಸ್ತುಗಳು, ಆಯುಧಗಳನ್ನು ತಲುಪಿಸಲು ಸಹಕಾರಿ ಆಗಲಿದೆ ಎನ್ನಲಾಗಿದೆ.

Click to comment

Leave a Reply

Your email address will not be published. Required fields are marked *