Tuesday, 28th January 2020

Recent News

ಆತ್ಮಹತ್ಯೆ ಮಾಡಿಕೊಳ್ತೀನಿ ಎಂದಿದ್ದ ಮಹಿಳೆ ಬೆಂಗ್ಳೂರಿನಲ್ಲಿ ಪತ್ತೆ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಹೈಪ್ರೊಫೈಲ್ ಕುಟುಂಬದ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಬೆಂಗಳೂರಿನಲ್ಲಿ ಪತ್ತೆ ಆಗಿದ್ದಾಳೆ.

ಕೋಮಲ್ ಆತ್ಮಹತ್ಯೆ ಡ್ರಾಮಾ ಮಾಡಿದ ಮಹಿಳೆ. ಕೋಮಲ್ ತನ್ನ ಕಾರನ್ನು ಗಾಜಿಯಾಬಾದ್‍ನ ಕಾಲುವೆ ಬಳಿ ಪಾರ್ಕ್ ಮಾಡಿದ್ದಳು. ಅಲ್ಲದೆ ಆ ಕಾರಿನಲ್ಲಿ ಡೆತ್‍ನೋಟ್ ಬರೆದಿಟ್ಟು ಅಲ್ಲಿಂದ ಪರಾರಿಯಾಗಿದ್ದಳು. ಆದರೆ ಈಗ ಕೋಮಲ್ ಬೆಂಗಳೂರಿನಲ್ಲಿ ಪತ್ತೆ ಆಗಿದ್ದಾಳೆ.

ಏನಿದು ಪ್ರಕರಣ?
ಕೋಮಲ್ ಗಾಜಿಯಾಬಾದ್ ಕಾಲುವೆ ಬಳಿ ತನ್ನ ಕಾರನ್ನು ನಿಲ್ಲಿಸಿದ್ದರಿಂದ ಆಕೆ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಹರಿದಾಡಿತ್ತು. ತನ್ನ ಡೆತ್‍ನೋಟ್‍ನಲ್ಲಿ ಪತಿಯ ಕಾಟ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಉಲ್ಲೇಖಿಸಿದ್ದಳು. ಹೀಗಾಗಿ 3 ದಿನಗಳ ಕಾಲ ಕಾಲುವೆಯಲ್ಲಿ ಹುಡುಕಾಡಿದರೂ ಆಕೆ ಪತ್ತೆ ಆಗಿರಲಿಲ್ಲ.

ಶನಿವಾರ ಬೆಳಗ್ಗೆ 11 ಗಂಟೆಗೆ ಪೊಲೀಸರಿಗೆ ಹಿಂಡೆನ್ ಬ್ಯಾರೇಜ್ ಬಳಿ ಸ್ಕಾರ್ಪಿಯೋ ಕಾರು ನಿಲ್ಲಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾಗ ಪೊಲೀಸರಿಗೆ ಡೆತ್‍ನೋಟ್ ಪತ್ತೆಯಾಗಿದೆ. ಆ ಡೆತ್‍ನೋಟ್‍ನಲ್ಲಿ ನಾನು ನೋಯ್ಡಾ ನಿವಾಸಿಯಾಗಿದ್ದು, ತಂದೆ ಭಾರತೀಯ ರೈತ ಸಂಘದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಆಗಿದ್ದಾರೆ ಎಂದು ಕೋಮಲ್ ಬರೆದಿದ್ದಳು.

ಮಗಳು ನಾಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ತಂದೆ ಅನಿಲ್, ದೆಹಲಿಯ ಪಾಂಡವನಗರದಲ್ಲಿ ಇರುವ ಅಭಿಷೇಕ್ ಜೊತೆ ಮಗಳ ಮದುವೆ ಮಾಡಿಸಿದ್ದೇನೆ. ಮದುವೆಗಾಗಿ ಸುಮಾರು ಒಂದೂವರೆ ಕೋಟಿ ರೂ. ಖರ್ಚು ಮಾಡಿದ್ದೇನೆ. ಇದರ ಹೊರತಾಗಿಯೂ ಅಭಿಷೇಕ್ ಹಾಗೂ ಆತನ ಕುಟುಂಬಸ್ಥರು ಆಕೆಗೆ ಕಿರುಕುಳ ನೀಡುತ್ತಿದ್ದರು. ಅಭಿಷೇಕ್ ಅವರ ತಂದೆ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದರು.

ಕೋಮಲ್ ಶುಕ್ರವಾರ ಸಂಜೆಯಿಂದ ಕಾಣೆಯಾಗಿದ್ದಳು. ಅಭಿಷೇಕ್ ಕುಟುಂಬದವರು ಪಾಂಡವನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಕೋಮಲ್ ಹಾಗೂ ಅಭಿಷೇಕ್ ಇಬ್ಬರು ಎಂಬಿಎ ಓದಿದ್ದು, ಕೋಮಲ್ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅಭಿಷೇಕ್ ಸ್ವಂತ ಬಿಸಿನೆಸ್ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *