ಲಾಸ್ಟ್ ಬಾಲ್ ಫಿನಿಶ್: ಮೊದಲ ಏಷ್ಯಾಕಪ್ ಗೆ ಮುತ್ತಿಟ್ಟ ಬಾಂಗ್ಲಾ ವನಿತೆಯರು

ಕೌಲಾಲಂಪುರ: ಮಲೇಷಿಯಾದಲ್ಲಿ ನಡೆದ ಏಷ್ಯಾ ಕಪ್ ಟಿ-20 ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಪಡೆದಿದ್ದು, ಈ ಮೂಲಕ ಮೊದಲ ಬಾರಿಗೆ ಏಷ್ಯಾಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.

ಟೀಂ ಇಂಡಿಯಾ ನೀಡಿದ್ದ 113 ರನ್‍ಗಳ ಗೆಲುವಿನ ಗುರಿ ಬೆನ್ನತ್ತಿದ ಬಾಂಗ್ಲಾ ಪರ ನಿಗರ್ ಸುಲ್ತಾನಾ (27) ಹಾಗೂ ರುಮಾನಾ ಅಹ್ಮದ್ (23) ಇಬ್ಬರ ಉತ್ತಮ ಆಟದ ನೆರವಿನಿಂದ ಮೂರು ವಿಕೆಟ್ ಅಂತರದ ಗೆಲುವು ಪಡೆಯಿತು. ಕೊನೆಯ ಓವರ್ ನಲ್ಲಿ ತಂಡದ ಗೆಲುವಿಗೆ 9 ರನ್‍ಗಳ ಅವಶ್ಯಕತೆಯಿತ್ತು. ಈ ವೇಳೆ ಟೀಂ ಇಂಡಿಯಾ ಕ್ಯಾಪ್ಟನ್ ಎಸೆದ ಓವರ್ ನ ಕೊನೆಯ ಎಸೆತದಲ್ಲಿ ಎರಡು ರನ್ ಸಿಡಿಸಿದ ಜಹನ್ಸಾ ಆಲಂ ಬಾಂಗ್ಲಾ ಗೆಲುವಿನ ನಗೆ ಬೀರಲು ಕಾರಣರಾದರು. ಭಾರತದ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಪೂನಂ ಯಾದವ್ 4 ಓವರ್ ಗಳಲ್ಲಿ 9 ರನ್ ನೀಡಿ 4 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ನಾಯಕಿ ಹರ್ಮನ್‍ ಪ್ರೀತ್ ಕೌರ್ ಅವರ ಏಕಾಂಗಿಯಾಗಿ ಹೋರಾಟ ನಡೆಸಿ ಅರ್ಧಶತಕ (56) ಸಿಡಿಸಿ ತಂಡ ಗೌರವ ಮೊತ್ತ ಗಳಿಸಲು ಕಾರಣರಾಗಿದ್ದರು. ಇನ್ನುಳಿದಂತೆ ತಂಡದ ಪರ ವೇದಾ ಕೃಷ್ಣಮೂರ್ತಿ (11), ಮಿಥಾಲಿ ರಾಜ್ (11) ಹಾಗೂ ಅಂತಿಮ ಹಂತದಲ್ಲಿ ಜೂಲನ್ ಗೋಸ್ವಾಮಿ (10) ರನ್ ಗಳಿಸಿದರು. ಸ್ಮೃತಿ ಮಂದಣ್ಣ (7), ದೀಪ್ತಿ ಶರ್ಮಾ (4), ಅನುಜಾ ಪಾಟೀಲ್ (3), ತನಿಯ ಭಾಟಿಯಾ (3), ಶಿಖಾ ಪಾಂಡೆ (1) ವೈಫಲ್ಯ ಅನುಭವಿಸಿದರು. ಇನ್ನು ಬಾಂಗ್ಲಾದೇಶದ ಪರ ರುಮಾನಾ ಅಹ್ಮದ್ ಮತ್ತು ಖದಿಜಾ ಟುಲ್ ಕುಬ್ರಾ ತಲಾ 2 ವಿಕೆಟ್ ಪಡೆದಿದ್ದು, ಜಹನ್ಸಾ ಆಲಂ ಮತ್ತು ಸಲ್ಮಾ ಕುಟನ್ ತಲಾ 1 ವಿಕೆಟ್ ಪಡೆದರು.

ಗಾಯದ ಸಮಸ್ಯೆಯಿಂದ ಪಂದ್ಯಕ್ಕೆ ಅಲಭ್ಯರಾಗಿದ್ದ ಟೀಂ ಇಂಡಿಯಾ ವೇಗಿ ಶಿಖಾ ಪಾಂಡೆ ಭಾರತಕ್ಕೆ ಪಂದ್ಯದಲ್ಲಿ ಹಿನ್ನಡೆ ಉಂಟಾಗಲು ಪ್ರಮುಖ ಕಾರಣವಾಯಿತು. ಫೈನಲ್ ಪಂದ್ಯದ ಸೋಲಿನೊಂದಿಗೆ ಟೀಂ ಇಂಡಿಯಾ ಮಹಿಳಾ ತಂಡ ವಾರದ ಅವಧಿಯಲ್ಲಿ ಎರಡನೇ ಭಾರಿಗೆ ಬಾಂಗ್ಲಾ ವಿರುದ್ಧ ಸೋಲಿನ ಕಹಿ ಅನುಭವಿಸಿದೆ. ಭಾರತದ ಸ್ಫೋಟಕ ಆಟಗಾರ್ತಿ ಮಿಥಾಲಿ ರಾಜ್ ಬಾಂಗ್ಲಾ ವಿರುದ್ಧದ ಎರಡು ಪಂದ್ಯಗಳಲ್ಲಿ ವೈಪಲ್ಯ ಅನುಭವಿಸಿದ್ದರು.

Leave a Reply

Your email address will not be published. Required fields are marked *