Monday, 17th June 2019

ಅಪಾರ್ಟ್‌ಮೆಂಟ್‌ನಿಂದ ಬಿದ್ದು ಅಮೆರಿಕ ಮೂಲದ ಯುವತಿ ಸಾವು – ಬೀಳೋ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಕುಡಿದ ಅಮಲಿನಲ್ಲಿ  ಅಪಾರ್ಟ್‌ಮೆಂಟ್‌  ಮೇಲಿಂದ ಬಿದ್ದು ಕೊಲಂಬಿಯಾ ಮೂಲದ ಯುವತಿ ಸಾವನ್ನಪ್ಪಿರುವ ಘಟನೆ ಜೀವನ್ ಭೀಮಾ ನಗರದಲ್ಲಿ ಭಾನುವಾರದಂದು ನಡೆದಿದೆ.

ಕರೀನಾ ಡೇನಿಯಲ್ (25) ಮೃತ ದುರ್ದೈವಿ. ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದ ಕರೀನಾ, ಇಂದಿರಾನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಸ್ನೇಹಿತೆ ಮರಿಯಾ ಜೊತೆ ಜೆ.ಬಿ ನಗರದ  ಅಪಾರ್ಟ್‌ಮೆಂಟ್‌ ವೊಂದರಲ್ಲಿ ವಾಸವಾಗಿದ್ದಳು.

ಶನಿವಾರ ಕರೀನಾ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ತನ್ನ ಸ್ನೇಹಿತೆ ಮರಿಯಾ ಜೊತೆಗೆ ಕರೀನಾ ಪಾರ್ಟಿಗೆ ಹೋಗಿದ್ದಳು. ಪಾರ್ಟಿ ಮುಗಿಸಿಕೊಂಡು ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ  ಅಪಾರ್ಟ್‌ಮೆಂಟ್‌ ಗೆ ಇಬ್ಬರು ವಾಪಾಸಾಗಿದ್ದಾರೆ. ಈ ವೇಳೆ ಸಿಗರೇಟ್ ಸೇದಲು ಬಾಲ್ಕನಿಗೆ ಹೋದಾಗ ಮೊದಲೇ ಕುಡಿದ ಅಮಲಿನಲ್ಲಿದ್ದ ಕರೀನಾ ಬಾಲ್ಕನಿ ಮೇಲಿನಿಂದ ಜಾರಿ ಬಿದ್ದು ಮೃತಪಟ್ಟಿದ್ದಾಳೆ.

ಯುವತಿ ಆಕಸ್ಮಿಕವಾಗಿ ಬಿದ್ದಿದ್ದಾ ಅಥವಾ ಆತ್ಮಹತ್ಯೆ ಮಾಡಿಕೊಂಡಿರುವುದಾ ಎಂಬುದು ತಿಳಿದು ಬಂದಿಲ್ಲ. ಆದರೆ  ಅಪಾರ್ಟ್‌ಮೆಂಟ್‌  ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಯುವತಿ ಬೀಳುತ್ತಿರುವ ದೃಶ್ಯ ಸೆರೆಯಾಗಿದೆ. ಜೆ.ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರೀನಾ ಸಾವಿನ ಸುದ್ದಿಯನ್ನು ರಾಯಭಾರ ಕಚೇರಿಗೆ ನೀಡಲಾಗಿದ್ದು, ರಾಯಭಾರ ಕಚೇರಿಯ ಅಧಿಕಾರಿಗಳ ಮೂಲಕ ಕರೀನಾ ಕುಟುಂಬಸ್ಥರಿಗೆ ಸಾವಿನ ಸುದ್ದಿಯನ್ನು ತಲುಪಿಸಲಾಗಿದೆ. ವಿದೇಶಿ ಪ್ರಜೆಗಳು ಮೃತಪಟ್ಟಲ್ಲಿ ಕುಟುಂಬ ಸದಸ್ಯರ ಸಮ್ಮುಖ ಮತ್ತು ರಾಯಭಾರ ಕಚೇರಿ ಸಿಬ್ಬಂದಿ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕು ಎನ್ನುವ ನಿಯಮವಿದೆ. ಹೀಗಾಗಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *