Saturday, 24th August 2019

ಭೀಕರ ಬರಗಾಲ ಎಫೆಕ್ಟ್- ಹಸಮಣೆ ಏರಬೇಕಿದ್ದ ಯುವತಿ ಸಾವು!

ಬೀದರ್: ಹಸಮಣೆ ಏರಬೇಕಿದ್ದ ಯುವತಿ ನೀರು ಸೇದುವಾಗ ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗಡಿ ಜಿಲ್ಲೆ ಬೀದರ್ ನಲ್ಲಿ ನಡೆದಿದೆ.

ಜಿಲ್ಲೆಯ ಔರಾದ್ ತಾಲೂಕಿನ ರಾಯಪಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಜಾತಾ ಮಲ್ಲಗೊಂಡ(24) ಮೃತ ದುರ್ದೈವಿ. ಇದೇ ತಿಂಗಳು 23ರಂದು ದೇವಿದಾಸ್ ಎಂಬಾತನ ಜೊತೆಗೆ ಸುಜಾತಾಳ ಮದುವೆ ನಿಶ್ಚಯವಾಗಿತ್ತು. ಆದರೆ ದುರಾದೃಷ್ಟವಶಾತ್ ಹಸಮಣೆ ಏರಬೇಕಿದ್ದ ಯುವತಿ ಕುಡಿಯುವ ನೀರು ತರಲು ಹೋಗಿ ಬಲಿಯಾಗಿದ್ದಾಳೆ. ಬಾವಿಯಿಂದ ನೀರು ಸೇದುವಾಗ ಕಾಲು ಜಾರಿ ಬಾವಿಗೆ ಬಿದ್ದು ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಗಡಿ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದು, ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಕುಡಿಯುವ ನೀರು ತರಲು ಹೋದ ಯುವತಿ ಬದುಕಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ನೂರಾರು ಕನಸು ಕಂಡು ಹಸೆ ಮಣೆ ಏರಬೇಕಾದ ಯುವತಿ ನೀರಿಗಾಗಿ ಬಲಿಯಾಗಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಮಗಳ ಮದುವೆ ಮಾಡುವ ಖುಷಿಯಲ್ಲಿದ್ದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಸದ್ಯ ಈ ಕುರಿತು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *