Connect with us

Dharwad

ಪರಿಹಾರ ಸಿಗದೆ ಬೇಸತ್ತು ಕೇಂದ್ರ ಸಚಿವ ಜೋಶಿ ಮನೆಯಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನ

Published

on

ಹುಬ್ಬಳ್ಳಿ: ಮಳೆಯಿಂದ ಬಿದ್ದ ಮನೆಗೆ ಪರಿಹಾರ ಕಲ್ಪಿಸುವಂತೆ ಅಲೆದು ಅಲೆದು ಸುಸ್ತಾದ ಮಹಿಳೆಯೊಬ್ಬರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಯ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಬದಾಮಿ ನಗರದಲ್ಲಿರುವ ಜೋಶಿ ಮನೆಗೆ ಪರಿಹಾರ ಕೋರಿ ಬಂದ ಮಹಿಳೆಯೊಬ್ಬರು ಕೇಂದ್ರ ಸಚಿವರು ಸಿಗದ ಪರಿಣಾಮ ಮನನೊಂದು ಮನೆಯ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀದೇವಿ ವೀರಪ್ಪ ಕಮ್ಮಾರ ಎಂಬ ಮಹಿಳೆಯೇ ಆತ್ಮಹತ್ಯೆಗೆ ಯತ್ನಿಸಿದರು. ಈ ಶ್ರೀದೇವಿ ವೀರಪ್ಪ ಕಮ್ಮಾರ ಅವರ ಬಿದ್ದ ಮನೆಗೆ ಪರಿಹಾರ ಕೊಡಿಸುವಂತೆ ಶಾಸಕ ಅಮೃತ ದೇಸಾಯಿಯವರ ಬಳಿ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಶಾಸಕರು ಮಾತ್ರ ಸಂಸದರ ಬಳಿ ಪರಿಹಾರ ಕೇಳುವಂತೆ ಹೇಳಿ ಕಳುಹಿಸಿದ್ದರು. ಅದರಂತೆ ಹಲವು ಬಾರಿ ಸಂಸದರ ಭೇಟಿಗಾಗಿ ಬಂದಿದ್ದರು. ಆದರೆ ಪ್ರಹ್ಲಾದ್ ಜೋಶಿಯವರ ಭೇಟಿಗೆ ಸಿಗದ ಪರಿಣಾಮ ಮಹಿಳೆ ಮನನೊಂದು ಜೋಶಿಯವರ ಮನೆಯ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೂಡಲೇ ಜೋಶಿಯವರ ಮನೆಯಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಮನೆಯಲ್ಲಿದ್ದ ಜನರು ಮಹಿಳೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಮಹಿಳೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಘಟನೆಯ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮನೆ ಮುಂದೆ ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ – ಸ್ಪಷ್ಟನೆ ನೀಡಿದ ಜೋಶಿ

ಈ ಪ್ರಕರಣದ ಕುರಿತು ಜಿಲ್ಲಾಡಳಿತದ ಪರವಾಗಿ ಧಾರವಾಡ ತಹಶಿಲ್ದಾರ್  ಸ್ಪಷ್ಟನೆ ನೀಡಿದ್ದಾರೆ. ಮಹಿಳೆಗೆ ಪರಿಹಾರ ನೀಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೂಚಿಸಿದ ನಂತರ ಸ್ಥಳ ಪರಿಶೀಲನೆ ನಡೆಸಿ ಸಿ ಕೆಟಗೆರಿಯಲ್ಲಿ ಹಾನಿಯಾದ ಮನೆಗೆ 50 ಸಾವಿರ ರೂಪಾಯಿ ಪರಿಹಾರ ಒದಗಿಸಲಾಗಿದೆ. ಸರ್ಕಾರದ ನಿಯಮದ ಪ್ರಕಾರ ಪರಿಹಾರದ ಹಣವನ್ನು 2020ರ ಜನವರಿ 28ರಂದು ಸಂತ್ರಸ್ತ ಕುಟುಂಬದ ಅಕೌಂಟ್‍ಗೆ ಜಮೆಯಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಪತಿ ವೀರಣ್ಣ ಪ್ರತಿ ತಿಂಗಳು 1,400 ರೂಪಾಯಿ ಅಂಗವಿಕಲರ ಮಾಸಾಶನ ಪಡೆಯುತ್ತಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಪಡಿತರ ಚೀಟಿ ವ್ಯವಸ್ಥೆ ಸಹ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *