Saturday, 7th December 2019

ದಲಿತನನ್ನು ಪ್ರೀತಿಸಿದ್ದೇ ತಪ್ಪಾಯ್ತು? ಕುಟುಂಬಸ್ಥರಿಂದ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ

-ಕೈ, ಕಾಲು ಮುಗಿದ್ರೂ, ಎಳೆದಾಡಿ, ಒದ್ದು ದೊಣ್ಣೆಯಿಂದ ಹೊಡೆದ್ರು

ಭೋಪಾಲ: ದಲಿತ ಯುವಕನನ್ನು ಪ್ರೀತಿಸಿ ಓಡಿ ಹೋಗಿದ್ದ 21 ವರ್ಷದ ಯುವತಿಯನ್ನು ಕುಟುಂಬಸ್ಥರು ದೊಣ್ಣೆಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡಿದಿದೆ.

ಯುವತಿ ದಲಿತ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಕ್ಕೆ ಆಕೆಯ ಕುಟುಂಬಸ್ಥರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ದೃಶ್ಯದಲ್ಲಿ ಕಾರ್ ನಂಬರ್ ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಈ ದೃಶ್ಯವನ್ನು ವಿಡಿಯೋ ಮಾಡಿದ್ದು, ಯುವತಿಯನ್ನು ಒಂದು ಬೆಟ್ಟದಲ್ಲಿ ಯುವಕರ ಗುಂಪೊಂದು ದೊಣ್ಣೆಯಿಂದ ಹೊಡೆಯುತ್ತಿದ್ದಾರೆ. ಯುವತಿಯನ್ನು ಕಾಲಿನಿಂದ ಒದೆಯುತ್ತಿರುವುದು, ಎಳೆದಾಡುತ್ತಿರುವುದು ಕಂಡು ಬಂದಿದೆ. ಯುವತಿಯು ನಿಲ್ಲಿಸುವಂತೆ ಕೇಳಿಕೊಂಡರು ಬಿಡದ ಯುವಕರು ಅವಳನ್ನು ಕಾಲಿನಿಂದ ಒದ್ದಿದ್ದಾರೆ.

ಈ ಘಟನೆ ಜೂನ್ 25 ರಂದು ನಡೆದಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂರು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿರುವ ಯುವಕರು ಯುವತಿಯ ಸಹೋದರರು ಮತ್ತು ನೆರೆಹೊರೆಯವರು ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿ ಕಾಣಿಸುವ ವಾಹನದ ಸಂಖ್ಯೆಯ ಆಧಾರದ ಮೇಲೆ ಯುವಕರನ್ನು ಪತ್ತೆ ಹಚ್ಚಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಯುವತಿಯು ದಲಿತ ಯುವಕನ ಜೊತೆ ಓಡಿಹೋಗಿದ್ದಳು. ಆಗ ಮನೆಯವರು ದೂರು ನೀಡಿದ ನಂತರ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ಕರೆದುಕೊಂಡು ಬಂದಿದ್ದಾರೆ. ನಂತರ ಯುವತಿಯನ್ನು ಮನೆಗೆ ಕರೆದುಕೊಂಡ ಹೋದ ಕುಟುಂಬದವರು ಯುವತಿಯನ್ನು ತಮ್ಮದೇ ಕುಟುಂಬದ ಭಿಲಾಲ ಬುಡಕಟ್ಟಿನ ಯುವಕನನ್ನು ಮದುವೆಯಾಗಲು ಹೇಳಿದ್ದಾರೆ. ಇದಕ್ಕೆ ಒಪ್ಪದ ಯುವತಿಯ ಮೇಲೆ ಈ ರೀತಿಯ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಘಟನೆ ಸಂಬಂಧ ಪ್ರಮುಖ ಆರೋಪಿಗಳ ವಿರುದ್ಧ ಹಲವು ಪ್ರಕರಣ ದಾಖಲಿಸಿರುವ ಪೊಲೀಸರು, ಸದ್ಯ ಯುವತಿಯ ನಾಲ್ಕು ಜನ ಸಹೋದರರು ಸೇರಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *