Saturday, 14th December 2019

Recent News

ದಿನಕ್ಕೆ 40 ಕಪ್ ಚಹಾ ಕುಡಿಯುತ್ತಿದ್ದ ಮಹಿಳೆ ‘ಟೀ ಬಾಕ್ಸ್’ನಲ್ಲೇ ಶವವಾದ್ಳು

– ತಾಯಿಯ ಕೊನೆ ಆಸೆ ತೀರಿಸಿದ ಮಗಳು

ಲಂಡನ್: ಇಂಗ್ಲೆಂಡ್‌ನ ಮಹಿಳೆಯೊಬ್ಬರಿಗೆ ಚಹಾ ಎಂದರೆ ಅಚ್ಚುಮೆಚ್ಚು, ಪ್ರತಿದಿನ ಏನಿಲ್ಲವೆಂದರು 30ರಿಂದ 40 ಕಪ್ ಚಹಾವನ್ನು ಮಹಿಳೆ ಸವಿಯುತ್ತಿದ್ದರು. ಅವರ ಚಹಾ ಪ್ರೀತಿ ಕೇವಲ ಅವರು ಬದುಕಿದ್ದಾಗ ಮಾತ್ರವಲ್ಲದೆ ಸಾವಿನಲ್ಲೂ ಜೊತೆಯಾಗಿದೆ.

ಇಂಗ್ಲೆಂಡ್‌ನ ಲೀಸೆಸ್ಟರ್ ಶೈರ್‌ನ ನಿವಾಸಿ ಟೀನಾ ವ್ಯಾಟ್ಸನ್(73) ಅವರಿಗೆ ಚಹಾ ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಅವರು ತಮ್ಮ ಸಾವಿನಲ್ಲೂ ಚಹಾ ತಮ್ಮೊಂದಿಗೆ ಒಂದಾಗಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಟೀನಾ ಅವರು ಸಾಯುವ 4 ವರ್ಷಗಳ ಹಿಂದೆಯೇ ಅವರು ತಾವು ನಿಧನವಾದರೆ ತಮ್ಮ ಅಂತ್ಯಸಂಸ್ಕಾರ ಹೇಗೆ ನಡೆಯಬೇಕು ಎನ್ನುವ ಬಗ್ಗೆ ಮಗಳು ಡೇಬ್ಸ್ ಬಳಿ ಹೇಳಿಕೊಂಡಿದ್ದರು. ತಮ್ಮ ಮೃತದೇಹವನ್ನು ಚಹಾದ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆಯಲ್ಲಿ ಇಟ್ಟು ಅಂತ್ಯಸಂಸ್ಕಾರ ಮಾಡಿ ಎಂದು ತಮ್ಮ ಆಸೆ ತಿಳಿಸಿದ್ದರು.

ಹೀಗಾಗಿ ಟೀನಾ ಸಾವನ್ನಪ್ಪಿದಾಗ ಅವರ ಮೃತದೇಹವನ್ನು ಚಹಾದ ಬ್ಯಾಗ್ ರೀತಿಯೇ ಕಾಣುವ ಶವದ ಪೆಟ್ಟಿಗೆಯಲ್ಲಿ ಇಟ್ಟು ಅಂತ್ಯಸಂಸ್ಕಾರ ಮಾಡಲಾಯಿತು. ಈ ವಿಚಾರ ತಿಳಿದು ಅನೇಕರು ಎಂಥ ವಿಚಿತ್ರ ಆಸೆಯೋ ಎಂದಿದ್ದರೆ, ಕೆಲವರು ತಾಯಿಯ ಕೊನೆ ಆಸೆ ಪೂರೈಸಿದ ಮಗಳ ಪ್ರೀತಿಗೆ ಭೇಷ್ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಡೇಬ್ಸ್, ನನ್ನ ತಾಯಿಯ ಆಸೆಯನ್ನು ಪೂರೈಸಿದ್ದೇನೆ ಎಂಬ ತೃಪ್ತಿ ನನಗಿದೆ. ಅಮ್ಮನನ್ನು ಚಹಾದ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆಯಲ್ಲಿ ಅಂತ್ಯಸಂಸ್ಕಾರ ಮಾಡಿರೋದನ್ನು ಅವರೂ ಕೂಡ ಸ್ವರ್ಗದಿಂದ ನೋಡಿದ್ದಾರೆ ಎಂದು ನಾನು ಅಂದುಕೊಂಡಿದ್ದೇನೆ. ಮೇಲಿನಿಂದ ತನ್ನ ಚಹಾ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆ ನೋಡಿ ಅವರು ಸಿಕ್ಕಾಪಟ್ಟೆ ನಕ್ಕಿರುತ್ತಾರೆ. ಅವರಿಗೆ ಇದರಿಂದ ಖುಷಿಯಾಗಿದೆ ಎಂದು ನನಗೆ ಗೊತ್ತು. ಈಗಲೂ ನಾನು ಚಹಾ ಮಾಡಿದಾಗಲೆಲ್ಲಾ ಅಮ್ಮನಿಗಾಗಿ ಚಹಾವನ್ನು ಎತ್ತಿಡುತ್ತೇನೆ ಎಂದು ಹೇಳಿದ್ದಾರೆ.

ನನ್ನ ಅಮ್ಮ 73ನೇ ವಯಸ್ಸಿಗೆ ಹೃದಯಾಘಾತದಿಂದ ನಮ್ಮನ್ನು ಅಗಲಿದರು. ಅವರು ಎರಡು ಬಾರಿ ಕ್ಯಾನ್ಸರ್ ಜೊತೆ ಹೋರಾಡಿ ಗುಣಮುಖರಾಗಿದ್ದರು. ಅವರು 14 ವರ್ಷದವರಾಗಿದ್ದಾಗ ಸ್ಪೇನ್‌ನಲ್ಲಿ ಒಂದು ಕೀಟ ಅವರನ್ನು ಕಚ್ಚಿತ್ತು. ಅದರ ಕಡಿತದಿಂದ ಅವರ 1 ಕಾಲಿಗೆ ಇನ್ಫೆಕ್ಷನ್ ಆಗಿ ಕಾಲನ್ನೇ ಕತ್ತರಿಸಬೇಕಾಯ್ತು. ಬಳಿಕ ಸೋಂಕು ಹರಡಿ ಇನ್ನೊಂದು ಕಾಲನ್ನು ಕೂಡ ಕತ್ತರಿಸಬೇಕಾಯ್ತು. ಎರಡೂ ಕಾಲನ್ನು ಕಳೆದುಕೊಂಡಿದ್ದರೂ ನನ್ನ ಅಮ್ಮ ಛಲ ಬಿಟ್ಟಿರಲಿಲ್ಲ. ಧೈರ್ಯದಿಂದ ತಮ್ಮ ಜೀವನ ನಡೆಸಿದ್ದರು. ಎಲ್ಲರನ್ನೂ ಸದಾ ಖುಷಿಯಾಗಿಡುತ್ತಿದ್ದರು ಎಂದು ತಾಯಿ ಬಗ್ಗೆ ತಿಳಿಸಿದ್ದಾರೆ. ಮಗಳು ತಾಯಿ ಮೇಲಿಟ್ಟಿರುವ ಪ್ರೀತಿ ಎಲ್ಲರ ಮನಗೆದ್ದಿದೆ.

Leave a Reply

Your email address will not be published. Required fields are marked *