Saturday, 25th January 2020

ಪತಿ ಮಾಡಿದ ರಾಕ್ಷಸ ಕೃತ್ಯದಿಂದ ಪತ್ನಿಗೆ ನಿತ್ಯ ನರಕಯಾತನೆ- ಕೊಪ್ಪಳದಲ್ಲೊಂದು ಮನಕಲಕುವ ಘಟನೆ

ಕೊಪ್ಪಳ: ಇಲ್ಲೊಬ್ಬ ಪತಿರಾಯ ಪತ್ನಿ ಪಾಲಿಗೆ ರಾಕ್ಷಸನಾಗಿದ್ದಾನೆ. ರಾಕ್ಷಸ ಪತಿ ಮಾಡಿದ ಕೃತ್ಯಕ್ಕೆ ಮಹಿಳೆಯೊಬ್ಬರು ಇದೀಗ ನಿತ್ಯ ನರಕಯಾತನೆ ಅನುಭವಿಸುತ್ತಿರೋ ಘಟನೆ ಕೊಪ್ಪಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಮದ ನಿವಾಸಿಯಾಗಿರೋ ಸುಜಾತಾಗೆ ತಾನು ಕಟ್ಟಿಕೊಂಡ ಪತಿಯೇ ಮೈ ಮೇಲೆ ಸೀಮೆ ಎಣ್ಣೆ ಸುರಿದು ಹತ್ಯೆಗೆ ಯತ್ನಿಸಿದ್ದಾನೆ. ಪರಿಣಾಮ ದೇಹದ 80 ರಷ್ಟು ಭಾಗ ಸುಟ್ಟು ಸುಜಾತಾ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

5 ವರ್ಷಗಳ ಹಿಂದೆ ಗಂಗಾವತಿ ತಾಲೂಕಿನ ಬಸವಪಟ್ಟಣ ಗ್ರಾಮದ ಉದಯ ಕುಮಾರ ಕನಕಗಿರಿ ಎಂಬಾತನೊಂದಿಗೆ ಸುಜಾತಾಗೆ ಮದುವೆ ಆಗಿತ್ತು. ತಂದೆ-ತಾಯಿಯಿಲ್ಲದ ಹುಡ್ಗನಿಗೆ ಮದುವೆ ಮಾಡಿಕೊಟ್ರೆ ಚೆನ್ನಾಗಿ ಇರುತ್ತಾಳೆ ಅಂದುಕೊಂಡಿದ್ರು ಹೆತ್ತವರು. ಆದ್ರೆ ಆಗಿದ್ದೆ ಬೇರೆ. ಉದಯ ಕುಮಾರ ವರದಕ್ಷಿಣೆ ತರುವಂತೆ ಪೀಡಿಸಲಾರಂಭಿಸಿದ್ದಾನೆ. ವರದಕ್ಷಿಣೆ ತರುವಂತೆ ಗಲಾಟೆ ತೆಗೆದು ರಾತ್ರಿ ಮಲಗಿದ್ದಾಗ ಹೆಂಡ್ತಿ ಮೈ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಚೀರಾಟ ಕೂಗಾಟ ಕೇಳಿದ ಸ್ಥಳೀಯರು ಕೂಡಲೇ ಸುಜಾತಾರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದಾರೆ.

ಈ ಘಟನೆ ನಡೆದು ಬರೋಬ್ಬರಿ ಒಂದು ವರ್ಷವಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕಿದ್ದ ಸಂದರ್ಭದಲ್ಲಿ ಪತಿ ಉದಯ ಕುಮಾರ ಕೈ-ಕಾಲಿಗೆ ಬಿದ್ದು, ಆಸ್ಪತ್ರೆ ಖರ್ಚು ನಾನೇ ನೋಡಿಕೊಳ್ಳುತ್ತೇನೆ. ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತ ಹೇಳಿ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಿಸಿಕೊಂಡು ಕಾಲ್ಕಿತ್ತಿದ್ದಾನೆ. ಇದೀಗ ಒಂದು ವರ್ಷ ಕಳೆದ್ರೂ ಅಸಾಮಿ ಪತಿ ಇಂದಿಗೂ ಪತ್ತೆಯಾಗಿಲ್ಲ.

ಇದೀಗ ಸುಜಾತಾ ಅವರ ದೇಹದ ಅರ್ಧ ಭಾಗ ಸುಟ್ಟು ಇಡೀ ಜೀವನ ನರಳುವಂತಾಗಿದೆ. ಸುಜಾತಾ ಪೋಷಕರು ಕಡುಬಡವರಾಗಿದ್ದು, ಏನು ಮಾಡಬೇಕೆಂದು ತೋಚದೇ ನಮ್ಮ ಮಗಳಿಗೆ ನ್ಯಾಯ ಕೊಡಿಸಬೇಕೆಂದು ಅಂಗಲಾಚುತ್ತಿದ್ದಾರೆ.

Leave a Reply

Your email address will not be published. Required fields are marked *