Connect with us

Crime

8ನೇ ತರಗತಿ ಫೇಲಾದವನಿಂದ ಶಸ್ತ್ರಚಿಕಿತ್ಸೆ- ತಾಯಿ, ಮಗು ದುರ್ಮರಣ

Published

on

ಲಕ್ನೋ: 8ನೇ ತರಗತಿ ಫೇಲಾದವನೊಬ್ಬ ಸಿಸೇರಿಯನ್ ಮಾಡಿ ತಾಯಿ-ಮಗುವಿನ ಸಾವಿಗೆ ಕಾರಣವಾದ ದುರಂತ ಘಟನೆಯೊಂದು ಉತ್ತರಪ್ರದೇಶದ ಸುಲ್ತಾನ್‍ಪುರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಘಟನೆಯಲ್ಲಿ ಸುಲ್ತಾನಪುರ ಜಿಲ್ಲೆಯ ಸೈನಿ ಗ್ರಾಮದ ನಿವಾಸಿ ಪೂನಮ್ ಹಾಗೂ ಆಕೆಯ ಪುಟ್ಟ ಕಂದಮ್ಮ ಮೃತಪಟ್ಟಿದ್ದಾರೆ. ಈ ಸಂಬಂಧ ರಾಜೇಂದ್ರ ಶುಕ್ಲಾ ಹಾಗೂ ಆಸ್ಪತ್ರೆಯ ಮಾಲೀಕ ರಾಜೇಶ್ ಸಹನಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಪೂನಂ ಪತಿ ರಾಜಾರಾಮ್ ಅವರು ಪತ್ನಿ ಹಾಗೂ ಮಗು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪೂನಂನನ್ನು ಆಕೆಯ ಪತಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಅಲ್ಲಿದ್ದ ನರ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಳು. ಅಂತೆಯೇ ಆ ಸ್ಪತ್ರೆಗೆ ತೆರಳಿ ಮಗುವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಬೇಕು ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರತೆಗೆಯುವಾಗ ತೀವ್ರ ರಕ್ತಸ್ರಾವವಾಗಿ ಪತ್ನಿ ಮೃತಪಟ್ಟರೆ, ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮಗು ಕೂಡ ಸಾವನ್ನಪ್ಪಿದೆ.

ಸೌಕರ್ಯಗಳೇ ಇಲ್ಲದ ಆಸ್ಪತ್ರೆಯ ಆಪರೇಷನ್ ಬೆಡ್ ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪೂನಂ ನನ್ನು ನಂತರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗವಂತೆ ಶುಕ್ಲಾ ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ಪೂನಂ ಪತಿ, ಕೂಡಲೇ ಆಕೆಯನ್ನು ಲಕ್ನೋದ ಟ್ರಾಮಾ ಕೇರ್ ಸೆಂಟರ್‍ಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಲ್ಲಿ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಎಸ್‍ಪಿ ಅರವಿಂದ ಚತುರ್ವೇದಿ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *