Crime
ಹೆಣ್ಣು ಮಗುವಿಗೆ ಜನ್ಮ ನೀಡಿ ಕೊರೊನಾಗೆ ಬಲಿಯಾದ ತಾಯಿ

– ನೀರಿಗಾಗಿ ಹಾತೊರೆಯುತ್ತಿದ್ದರೂ ಸಿಕ್ಕಿಲ್ಲ
ಗಾಂಧಿನಗರ: ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸೂರತ್ ಸಿವಿಲ್ ಆಸ್ಪತ್ರೆ ಕೋವಿಡ್ ವಾರ್ಡ್ನಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ಪೂನಾಂಬೆನ್ ಎಂದು ಗುರುತಿಸಲಾಗಿದೆ. ಮಾರ್ಚ್ 18 ರಂದು ಆಸ್ಪತ್ರೆಯಲ್ಲಿ ಪೂನಾಂಬೆನ್ ಅವರು ಮಗಳಿಗೆ ಜನ್ಮ ನೀಡಿದ್ದರು. ಇದಕ್ಕೂ ಮೊದಲು ಅವರು ಕೋವಿಡ್ ಪರೀಕ್ಷೆ ಮಾಡಿದ್ದು, ವರದಿಯಲ್ಲಿ ನೆಗೆಟಿವ್ ಬಂದಿತ್ತು. ನಂತರ ಮತ್ತೆ ಪರೀಕ್ಷೆಯನ್ನು ಮಾಡಿದಾಗ ಅವರಿಗೆ ಕೋವಿಡ್ 19 ಇರುವುದು ದೃಢಪಟ್ಟಿತ್ತು. ಹೀಗಾಗಿ ಪೂನಂ ಅವರನ್ನು ಕೋವಿಡ್ ವಾರ್ಡ್ಗೆ ಸ್ಥಳಾಂತರಿಸಲಾಯಿತು.
ಹೆರಿಗೆಯ ಬಳಿಕ ಪೂನಂ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು, ಕುಡಿಯುವ ನೀರಿಗಾಗಿ ಹಾತೊತೆಯುತ್ತಿದ್ದರು. ಆದರೆ ಅವರನ್ನು ನೋಡಿಕೊಳ್ಳಲು ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಅವರು ಬಾಮೈದ ಸಹಾಯ ಕೋರಿ ವೀಡಿಯೊ ಕರೆ ಮಾಡಿದರು. ಅದಾದ ಬಳಿಕ ಕುಟುಂಬದವರು ಕೂಡಲೇ ಆಸ್ಪತ್ರೆಯ ವಾರ್ಡ್ನ ಸಿಬ್ಬಂದಿಗೆ ಫೋನ್ ಕರೆ ಮಾಡಿದ್ದಾರೆ. ಆದರೆ ಅಲ್ಲಿ ಯಾರೂ ಫೋನ್ ಎತ್ತಲಿಲ್ಲ. ಪರಿಣಾಮ ಮರುದಿನ ಮಾರ್ಚ್ 20 ರಂದು ಮಹಿಳೆ ಮೃತಪಟ್ಟಿದ್ದಾರೆ.
ಮಾರ್ಚ್ 19ರ ರಾತ್ರಿ ಅತ್ತಿಗೆ ವೀಡಿಯೋ ಕರೆ ಮಾಡಿದಾಗ ಹಾಸಿಗೆಯಿಂದ ಎದ್ದೇಳಲು ಸಹ ಸಾಧ್ಯವಿಲ್ಲ ಎಂದು ಪೂನಾಂಬೆನ್ ಅವರ ಬಾಮೈದ ದೀಪಕ್ ಹೇಳಿದ್ದಾರೆ.
ವಿಜಯನಗರ ಸೊಸೈಟಿಯಲ್ಲಿ ವಾಸಿಸುವ ಪೂನಂ 9 ವರ್ಷಗಳ ಹಿಂದೆ ತುಷಾರ್ ಜೆಥೆ ಎಂಬವರನ್ನು ವಿವಾಹವಾದರು. ಅವರಿಗೆ ಈಗಾಗಲೇ ಓರ್ವ ಮಗಳಿದ್ದಾರೆ. ಮಗು ಹುಟ್ಟಿದ ಬಳಿಕ ಆಕೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ಪೂನಮ್ ಬಾಮೈದ ಹೇಳಿದರು. ಆದರೆ ಈ ಮೊದಲು ಯಾವುದೇ ಕಿಡ್ನಿ ಸಮಸ್ಯೆ ಇಲ್ಲದಿದ್ದು, ಇದೀಗ ಹೇಗೆ ಹೀಗಾಯಿತು ಎಂದು ಅವರು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
