Connect with us

Crime

5 ಸಾವಿರ ರೂ.ಗೆ 5 ದಿನದ ಮಗು ಮಾರಾಟ ಮಾಡಿದ್ದ ತಾಯಿ

Published

on

– ಸರ್ಕಾರಿ ಆಸ್ಪತ್ರೆ ಸ್ಟಾಫ್ ನರ್ಸ್ ಸೇರಿ ನಾಲ್ವರ ಬಂಧನ

ದಾವಣಗೆರೆ: ಹೆತ್ತ ಅಮ್ಮನೇ ತನ್ನ 5 ದಿನದ ಗಂಡು ಮಗುವನ್ನು ಹಣಕ್ಕೆ ಮಾರಾಟ ಮಾಡಿದ ಹೃದಯವಿದ್ರಾವಕ ಘಟನೆ ದಾವಣಗೆರೆಯ ಹೊನ್ನಾಳಿ ತಾಲೂಕಿನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ. ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯ ಸ್ಟಾಫ್ ನರ್ಸ್ ಕುಮಾರ್, ಹೊನ್ನಾಳಿ ಪಟ್ಟಣದ ನಿವಾಸಿ, ಹಿರೇಕೇರೂರು ಸರ್ಕಾರಿ ಆಸ್ಪತ್ರೆಯಲ್ಲಿ ಕಂಟ್ರ್ಯಾಕ್ಟ್ ಬೇಸ್ ಮೇಲೆ ಡಯಾಲಿಸಿಸ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿರುವ ಬಸವರಾಜ್ ಹಾಗೂ ಮಗುವನ್ನು ಮಾರಾಟಕ್ಕೆ ತೆಗೆದುಕೊಂಡಿದ್ದ ದಾವಣಗೆರೆಯ ಡಿ.ಎಸ್. ಅಣ್ಣೇಶ ನಾಯ್ಕ, ಪಿ.ಲಾವಣ್ಯ ಬಂಧಿತರು.

ಹೊನ್ನಾಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸ್ಟಾಫ್ ನರ್ಸ್ ಕುಮಾರ್, ಡಿ ಗ್ರೂಪ್ ನೌಕರ ಮಹೇಶ್ ಮತ್ತು ಹಿರೇಕೇರೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಬಸವರಾಜ್ ಕುಮ್ಮಕ್ಕಿನಿಂದ ಈ ಕೃತ್ಯ ನಡೆದಿದೆ. ನ್ಯಾಮತಿ ತಾಲೂಕಿನ ಕುರುವ ಗ್ರಾಮದ ನಿಂಗಮ್ಮ ಹೊನ್ನಾಳಿ ಸರ್ಕಾರಿ ಆಸ್ಪತ್ರೆಯಲ್ಲಿ ಮೇ 20ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ನಂತರ 5 ದಿನದ ಗಂಡು ಮಗುವನ್ನು 5 ಸಾವಿರ ರೂ.ಗೆ ಕಾನೂನು ಬಾಹಿರವಾಗಿ ತನ್ನ ಸಂಬಂಧಿಕರಲ್ಲದ ದಾವಣಗೆರೆ ನಗರದ ಅಣ್ಣೇಶನಾಯ್ಕ ಮತ್ತು ಅವರ ಅಕ್ಕ ಲಾವಣ್ಯಗೆ ಹೊನ್ನಾಳಿ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರು ಮಾರಾಟ ಮಾಡಿದ್ದಾಳೆ.

ಈ ಸಂಬಂಧ ಹೊನ್ನಾಳಿ ತಾಲೂಕಿನ ಶಿಶು ಅಭಿವೃದ್ದಿ ಅಧಿಕಾರಿ ಮಹಾಂತಸ್ವಾಮಿ ಪೂಜಾರ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಕೂಡಲೇ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ. ಎಸ್‍ಪಿ ಆದೇಶದ ಮೇರೆಗೆ ಚನ್ನಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ್.ಜಿ.ಮುನ್ನೋಳಿ ನೇತೃತ್ವದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಟಿ.ವಿ.ದೇವರಾಜ್, ಪೊಲೀಸ್ ಉಪ-ನಿರೀಕ್ಷಕ ಟಿ.ಎನ್. ತಿಪ್ಪೇಸ್ವಾಮಿ ಮತ್ತು ಸಿಬ್ಬಂದಿ ತಂಡವು ಆರೋಪಿಗಳನ್ನು ಬಂಧಿಸಿದೆ.

ಮತ್ತೋರ್ವ ಆರೋಪಿ ಮಹೇಶ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿ ನಿಂಗಮ್ಮಳನ್ನು ವಿಚಾರಣೆ ನಡೆಸಲಾಗಿದ್ದು, ಬಾಣಂತಿಯಾಗಿದ್ದರಿಂದ ಇವರ ಮಗುವನ್ನು ಪೋಷಣೆಗಾಗಿ ಜಿಲ್ಲಾ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ವಶಕ್ಕೆ ನೀಡಲಾಗಿದೆ.