Sunday, 16th June 2019

ಪತಿ ಮನೆಯಿಂದ ಹೊರಹೋಗ್ತಿದ್ದಂತೆ ಪತ್ನಿ, ಮೂವರು ಮಕ್ಕಳ ಹತ್ಯೆ!

ಪಾಟ್ನಾ: ಮಹಿಳೆ ಮತ್ತು ಆಕೆಯ ಮೂವರು ಮಕ್ಕಳ ಕುತ್ತಿಗೆಯನ್ನು ಕತ್ತರಿಸಿ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

ತಬಾಸ್ಸಮ್ (30), ಮಗಳು ಅಲಿಯಾ (6) ಮತ್ತು ಪುತ್ರರಾದ ಸಮೀರ್ (4) ಹಾಗೂ ಶಬ್ಬೀರ್ (8) ಕೊಲೆಯಾದ ದುರ್ದೈವಿಗಳು. ಪತಿ ಆಲಮ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಮಾಧೋಪಾಡಾ ಗ್ರಾಮದಲ್ಲಿ ವಾಸಿಸುತ್ತಿದ್ದನು. ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ಆಲಮ್ ಮನೆಯಿಂದ ಹೊರಗಡೆ ಹೋಗಿದ್ದಾನೆ. ಆಗ ಕೆಲವು ಮಂದಿ ಮನೆಗೆ ನುಗ್ಗಿ ಮಹಿಳೆ ಮತ್ತು ಮಕ್ಕಳ ಕುತ್ತಿಗೆಯನ್ನು ಕತ್ತರಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಮತ್ತು ಮಕ್ಕಳ ಕಿರುಚಾಟ ಕೇಳಿ ನೆರೆಹೊರೆಯವರು ಓಡಿ ಬಂದಿದ್ದಾರೆ. ಆದರೆ ಆರೋಪಿಗಳು ಮನೆಯ ಮುರಿದ ಕಿಟಕಿಯಿಂದ ಪರಾರಿಯಾಗಿದ್ದಾರೆ. ಭೂಮಿ ವಿವಾದದಿಂದ ಈ ಕೊಲೆ ಮಾಡಲಾಗಿದೆ ಎಂದು ಆಲಂ ಆರೋಪಿಸಿದ್ದು, ಈ ಕುರಿತು ಅದೇ ಗ್ರಾಮದ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾನೆ ಎಂದು ಡಿಎಸ್‍ಪಿ ಕೆ.ಡಿ. ಸಿಂಗ್ ತಿಳಿಸಿದ್ದಾರೆ.

ಈ ಘಟನೆಯಲ್ಲಿ ಪತಿ ಆಲಮ್ ಪಾತ್ರವೂ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಈ ಕುರಿತು ಯಾರನ್ನು ಬಂಧಿಸಿಲ್ಲ ಎಂದು ಸಿಂಗ್ ಹೇಳಿದರು.

Leave a Reply

Your email address will not be published. Required fields are marked *