Wednesday, 16th October 2019

Recent News

ಯೂ ಟರ್ನ್ ಹೊಡೆದ ಎಂಟಿಬಿ ನಾಗರಾಜ್

ಬೆಂಗಳೂರು: ಘಟಾನುಘಟಿ ನಾಯಕರ ಮುಂದೆ ರಾಜೀನಾಮೆ ವಾಪಸ್ ಪಡೆಯುತ್ತೇನೆ ಎಂದು ಹೇಳಿದ ಕಾಂಗ್ರೆಸ್ ಶಾಸಕ ಎಂ.ಟಿ.ಬಿ ನಾಗರಾಜ್ ಏಕಾಂಗಿಯಾಗಿ ಕಾರಿನಲ್ಲಿ ಸಿಕ್ಕಿದಾಗ ತಮ್ಮ ಮಾತಿನ ವರಸೆಯನ್ನೇ ಬದಲಿಸಿದರು. ಸುಧಾಕರ್ ರಾಜೀನಾಮೆ ವಾಪಸ್ ಪಡೆಯಲು ಒಪ್ಪಿಕೊಂಡಿಲ್ಲ ಎಂದಾದರೆ ನಾನೊಬ್ಬನೇ ವಾಪಸ್ ಬಂದು ಏನು ಮಾಡಲಿ ಎಂದು ಎಂಟಿಬಿ ನಾಗರಾಜ್ ಪ್ರಶ್ನಿಸಿದ್ದಾರೆ.

ಸುಧಾಕರ್ ಅವರನ್ನು ಸಂಪರ್ಕ ಮಾಡಿ ಅವರ ಜೊತೆ ಮಾತನಾಡಿ ನಾವು ಸೆಟ್ಲ್ ಮಾಡಿದ್ದೀವಿ ನಿಂದೇನಪ್ಪಾ ಎಂದು ಕೇಳ್ತೀನಿ. ನಾವಿಬ್ಬರೂ ಜೊತೆಯಾಗಿಯೇ ರಾಜೀನಾಮೆ ನೀಡಿದ್ದೆವು. ಇದ್ದರೆ ಪಾರ್ಟಿಯಲ್ಲಿ ಇಬ್ಬರೂ ಇರಬೇಕು, ಹೋದರೆ ಇಬ್ಬರೂ ಹೋಗಬೇಕು ಅಂದುಕೊಂಡು ಬಂದಿದ್ದೆವು. ಅದರಂತೆಯೇ ಸುಧಾಕರ್ ಮನವೊಲಿಸಬೇಕಲ್ಲಾ ಎಂದು ಪ್ರಶ್ನಿಸಿದರು.

ನಾನು ಕಾಂಗ್ರೆಸ್‍ನಲ್ಲೇ ಇರುವ ತೀರ್ಮಾನಕ್ಕೆ ಬಂದಿದ್ದೇನೆ. ನೀನೇನ್ ಯೋಚನೆ ಮಾಡ್ತೀಯಾ ಎಂದು ಸುಧಾಕರ್ ಅವರನ್ನು ಕೇಳುತ್ತೇನೆ. ನನ್ನ ಪ್ರಕಾರ ಸುಧಾಕರ್ ನನ್ನ ಮನವಿಗೆ ಒಪ್ಪಿಕೊಳ್ಳಲೇ ಬೇಕು. ಸುಧಾಕರ್ ಒಪ್ಪಿಕೊಂಡಿಲ್ಲ ಎಂದರೆ ನಾನು ಒಬ್ಬನೇ ಬಂದು ಏನು ಮಾಡೋಕಾಗುತ್ತದೆ ಎಂದು ಮಾತು ಮುಗಿಸಿ ಕಾರಿನಲ್ಲಿ ಹೊರಟರು.

ಇದಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಂಧಾನ ಸಭೆ ಬಳಿಕ ಸಚಿವ ಎಂಟಿಬಿ ನಾಗರಾಜ್ ಅವರು, ಕಾರಣಾಂತರಗಳಿಂದ ಮನಸ್ಸಿಗೆ ಬೇಜಾರು ಆಗಿತ್ತು. ಹೀಗಾಗಿ ರಾಜೀನಾಮೆ ಕೊಟ್ಟಿದ್ದೆ. ಈಗ ಪಕ್ಷದ ನಾಯಕರ ಮಾತಿಗೆ ಬೆಲೆ ಕೊಟ್ಟು ನಿರ್ಧಾರವನ್ನು ಬದಲಿಸಿ, ರಾಜೀನಾಮೆ ವಾಪಸ್ ಪಡೆಯುತ್ತೇನೆ. ಕಾಂಗ್ರೆಸ್‍ನಲ್ಲೇ ಉಳಿಯುತ್ತೇನೆ ಹಾಗೂ ಸ್ನೇಹಿತರನ್ನು ಕರೆತರುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಕೊಟ್ಟಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಹೊರ ಹೋಗುವುಕ್ಕೆ ನನಗೂ ಇಷ್ಟ ಇರಲಿಲ್ಲ. ಶಾಸಕ ಡಾ.ಸುಧಾಕರ್ ಹಾಗೂ ನಾನು ಆತ್ಮೀಯರು. ಹೀಗಾಗಿ ಇಬ್ಬರು ಚರ್ಚೆ ಮಾಡಿಯೇ ರಾಜೀನಾಮೆ ಸಲ್ಲಿಸಿದ್ದೇವು. ಇಂದು ಹಿರಿಯ ನಾಯಕರು ಪಕ್ಷಕ್ಕೆ ನನ್ನ ಅವಶ್ಯಕತೆ ಎಷ್ಟಿದೆ ಎನ್ನುವುದನ್ನು ಮನವರಿಕೆ ಮಾಡಿದ್ದಾರೆ. ಹೀಗಾಗಿ ರಾಜೀನಾಮೆ ವಾಪಸ್ಸು ಪಡೆಯುತ್ತೇನೆ. ರಾಜೀನಾಮೆ ವಾಪಸ್ ಪಡೆಯುವಂತೆ ಸುಧಾಕರ್ ಅವರಿಗೂ ಸಲಹೆ ನೀಡುತ್ತೇನೆ ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಸುಧಾಕರ್ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರು ಮುಂಬೈನಿಂದ ವಾಪಸ್ ಬರುತ್ತಾರೆ ಎಂಬ ನಂಬಿಕೆ ನನಗಿದೆ. ವಿಶ್ವಾಸಮತಯಾಚನೆ ವೇಳೆಗೆ ಎಲ್ಲ ಅತೃಪ್ತ ಶಾಸಕರ ಮನವೊಲಿಕೆ ಯತ್ನಿಸುತ್ತೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *