Sunday, 15th September 2019

ನಿಮ್ಮ ಕುಟುಂಬಕ್ಕಾಗಿ ಸೆಲ್ಫಿ – ಅಭಿನಂದನ್ ಜೊತೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದ ಸಹೋದ್ಯೋಗಿಗಳು

ಶ್ರೀನಗರ: ಪಾಕಿಸ್ತಾನದಿಂದ ಬಿಡುಗಡೆಯಾದ ಬಳಿಕ ಟೈಗರ್ ಅಭಿನಂದನ್ ಹೇಗಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಯಾಕೆಂದರೆ ಇದುವರೆಗೆ ಅವರ ಒಂದೇ ಒಂದು ವೀಡಿಯೋ ರಿಲೀಸ್ ಆಗಿರಲಿಲ್ಲ. ಈಗ ಅಭಿನಂದನ್ ಅವರ ಮೊದಲ ವೀಡಿಯೋ ರಿಲೀಸ್ ಆಗಿದೆ.

ಎಫ್ 16 ವಿಮಾನವನ್ನು ಹೊಡೆದು ಹಾಕಿ ಪಾಕ್ ಕಸ್ಟಡಿಯಲ್ಲಿದ್ದ ಅಭಿನಂದನ್ ಶ್ರೀನಗರದಲ್ಲಿ ತಮ್ಮ ಸಹೋದ್ಯೋಗಿಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ ವಾಯು ಸೇನೆಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಇದಾದ ಬಳಿಕ ಸಹೋದ್ಯೋಗಿಗಳು ಅಭಿನಂದನ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ.

ಈ ವೇಳೆ ಅಭಿನಂದನ್, ನನ್ನ ಬಿಡುಗಡೆಗಾಗಿ ಪ್ರಾರ್ಥನೆ ಮಾಡಿದ ನಿಮಗೆ ಮತ್ತು ನಿಮ್ಮ ಕುಟುಂಬಸ್ಥರಿಗೆ ನನ್ನ ಧನ್ಯವಾದ, ನಾನು ನಿಮ್ಮ ಕುಟುಂಬಕ್ಕಾಗಿ ಪೋಸ್ ಕೊಡುತ್ತಿದ್ದೇನೆ ಎಂದು ಪ್ರೀತಿಯಿಂದ ಹೇಳಿದ್ದಾರೆ. ಏಪ್ರಿಲ್ ಕೊನೆಯ ವಾರದಲ್ಲಿ ಅಭಿನಂದನ್ ಜೊತೆಗೆ ಫೋಟೋಗಳನ್ನು ಕ್ಲಿಕ್ಕಿಸಿದ್ದು, ಈಗ ವಿಡಿಯೋ ವೈರಲ್ ಆಗಿದೆ.

ಅಭಿನಂದನ್ ವರ್ಧಮಾನ್ ಅವರು ಶ್ರೀನಗರದಲ್ಲಿರುವ ವಾಯುನೆಲೆಯಲ್ಲಿ ಕರ್ತವ್ಯದಲ್ಲಿದ್ದರು. ಆದರೆ ಅವರಿಗೆ ಜೈಶ್ ಉಗ್ರರ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರನ್ನು ಶ್ರೀನಗರದಿಂದ ಈಗ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.

ಫೆ.27 ರಂದು ಮಿಗ್ 21 ವಿಮಾನದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕ ಬಿದ್ದಿದ್ದ ಅಭಿನಂದನ್ 58 ಗಂಟೆಗಳ ಬಳಿಕ ಬಿಡುಗಡೆಯಾಗಿದ್ದರು. ಡಿ ಬ್ರೀಫಿಂಗ್ ಆದ ಬಳಿಕ ಅಭಿನಂದನ್ ಅವರಿಗೆ 4 ವಾರಗಳ ಆನಾರೋಗ್ಯದ ರಜೆ ಮೇಲೆ ಮನೆಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅಭಿನಂದನ್ ಚೆನ್ನೈನಲ್ಲಿರುವ ಮನೆಗೆ ತೆರಳದೇ ಶ್ರೀನಗರದ ವಾಯುನೆಲೆಗೆ ಮರಳಿದ್ದರು. ಭಾರತಕ್ಕೆ ಮರಳಿದ ನಂತರ ವೈದ್ಯಕೀಯ ಚಿಕಿತ್ಸೆ, ವಾಯು ಸೇನೆಯ ವಿಚಾರಣೆಯ ನಂತರ ರಜೆಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅಭಿನಂದನ್ ಮನೆಗೆ ತೆರಳದೇ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಫೆ.14 ರಂದು ಪುಲ್ವಾಮಾದಲ್ಲಿ ನಡೆದ ದಾಳಿಯನ್ನು ಜೈಷ್-ಎ-ಮೊಹಮ್ಮದ್ ಸಂಘಟನೆ ಹೊಣೆ ಹೊತ್ತುಕೊಂಡ ಬಳಿಕ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪರಿಣಾಮ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಭಾರತ ನೆಲವನ್ನು ಪ್ರವೇಶಿಸಿದ್ದ ಪಾಕ್ ಯುದ್ಧ ವಿಮಾನಗಳು ದಾಳಿ ನಡೆಸಲು ವಿಫಲವಾಗಿ ಹಿಂದಿರುಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಎಫ್ 16 ವಿಮಾನವನ್ನು ಚೇಸ್ ಮಾಡುತ್ತಿದ್ದಾಗ ಮಿಗ್ ವಿಮಾನ ಪತನಗೊಂಡು ಅಭಿನಂದನ್ ಪ್ಯಾರಾಚೂಟ್ ಸಹಾಯದಿಂದ ಧುಮುಕಿದ್ದರು.

ಪಾಕ್ ಅಕ್ರಮಿತ ಪ್ರದೇಶದಲ್ಲಿ ಬಿದ್ದ ವೇಳೆ ಅಭಿನಂದನ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿದ್ದರು. ಅದಕ್ಕೂ ಮುನ್ನವೇ ಸೇನೆಗೆ ಸಂಬಂಧಿಸಿದ್ದ ಮುಖ್ಯ ದಾಖಲೆಗಳು ಪಾಕಿಸ್ತಾನದ ಸೇನೆಗೆ ಸಿಗದಂತೆ ಮಾಡಿ ನಾಶ ಪಡಿಸಿದ್ದರು. ಅಲ್ಲದೇ ಕೆಲ ದಾಖಲೆಗಳನ್ನು ತಾವೇ ನುಂಗಿಹಾಕಿದ್ದರು. ಪಾಕಿಸ್ತಾನದಿಂದ ವಾಪಸ್ ಆದ ಬಳಿಕ ಮಾರ್ಚ್ 2 ರಂದು ಅಭಿನಂದನ್ ಅವರನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಆಗಿದ್ದರು. ಆ ಬಳಿಕ ದೆಹಲಿಯ ಸೇನೆಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು.

Leave a Reply

Your email address will not be published. Required fields are marked *