Saturday, 7th December 2019

ಎಲ್ಲೆ ಇದ್ದರೂ ಅಕ್ರಮ ವಲಸಿಗರನ್ನು ಹುಡುಕಿ ದೇಶದಿಂದ ಹೊರ ಹಾಕ್ತೀವಿ: ಶಾ ಗುಡುಗು

ನವದೆಹಲಿ: ದೇಶದ ಯಾವುದೇ ಮೂಲೆಯಲ್ಲಿದ್ದರೂ ಅಕ್ರಮ ವಲಸಿಗರನ್ನು ಸರ್ಕಾರ ಗುರುತಿಸಲಿದೆ. ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿ ನೆಲೆಸಿರುವವರನ್ನು ಮುಲಾಜಿಲ್ಲದೆ ದೇಶದಿಂದ ಹೊರ ಹಾಕಲಾಗುವುದು ಎಂದು ಗೃಹ ಸಚಿವ ಅಮಿತ್ ಗುಡುಗಿದ್ದಾರೆ.

ರಾಜ್ಯಸಭೆಯ ಅಧಿವೇಶನದಲ್ಲಿ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಜವೇದ್ ಅಲಿ ಖಾನ್ ಅವರು ಇತರ ರಾಜ್ಯಗಳಲ್ಲಿಯೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಜಾರಿಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ತುಂಬಾ ಒಳ್ಳೆಯ ಪ್ರಶ್ನೆ. ಎನ್‍ಆರ್‍ಸಿ ಅಸ್ಸಾಂ ಒಪ್ಪಂದದ ಭಾಗವಾಗಿದೆ ಹಾಗೂ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಇದೂ ಒಂದು ಅಂಶವಾಗಿತ್ತು. ಇದರ ಆಧಾರದ ಮೇಲೆಯೇ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ತಿಳಿಸಿದರು.

ದೇಶದ ಪ್ರತಿ ಇಂಚೂ ಬಿಡದೇ, ಅನಧಿಕೃತವಾಗಿ ವಾಸವಿರುವ ಪ್ರತಿಯೊಬ್ಬ ವಿದೇಶಿಗರನ್ನು ಸರ್ಕಾರ ಗುರುತಿಸಲಿದೆ. ಅಂತರಾಷ್ಟ್ರೀಯ ಕಾನೂನಿನ ಅನ್ವಯ ಮುಲಾಜಿಲ್ಲದೆ ಪ್ರತಿಯೊಬ್ಬರನ್ನೂ ಹೊರ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಎನ್​ಆರ್​ಸಿ ನೋಂದಣಿ ಗಡುವನ್ನು ವಿಸ್ತರಿಸುವಂತೆ ಅಸ್ಸಾಂನಿಂದ ಹೆಚ್ಚು ಮನವಿಗಳು ಕೇಂದ್ರ ಸರ್ಕಾರಕ್ಕೆ ಬರುತ್ತಿವೆ. ಈಗಾಗಲೇ 25 ಲಕ್ಷ ಅರ್ಜಿದಾರರು ಸಹಿ ಹಾಕಿದ್ದು, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಎಲ್ಲ ತಪ್ಪುಗಳನ್ನು ಸರಿ ಪಡಿಸುವಂತೆ ರಾಷ್ಟ್ರಪತಿಗಳು ತಿಳಿಸಿದ್ದಾರೆ ಎಂದು ಇದೇ ವೇಳೆ ರಾಜ್ಯ ಗೃಹ ಸಚಿವ ನಿತ್ಯಾನಂದ ರೈ ತಿಳಿಸಿದರು.

ಅನೇಕ ನೈಜ ಹೆಸರುಗಳನ್ನು ಕೈ ಬಿಡಲಾಗಿದೆ. ಅಲ್ಲದೆ ಅನೇಕ ನಕಲಿ ಹೆಸರುಗಳನ್ನು ನೋಂದಾಯಿಸಲಾಗಿರುವುದರಿಂದ ಕಾಲಾವಕಾಶವನ್ನು ವಿಸ್ತರಿಸುವಂತೆ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಮನವಿ ಮಾಡಿದೆ. ಸ್ವಲ್ಪ ತಡವಾಗಬಹುದು ಆದರೆ, ಎನ್​ಆರ್​ಸಿಯನ್ನು ಯವುದೇ ದೋಶವಿಲ್ಲದೆ ಜಾರಿಗೊಳಿಸಲಾಗುವುದು. ಎನ್​ಆರ್​ಸಿಯಿಂದ ಯಾವುದೇ ನೈಜ ನಾಗರಿಕರು ಹೊರಗುಳಿಯಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿರುವ ರೊಹಿಂಗ್ಯಾ ಮುಸ್ಲಿಮರ ಕುರಿತು ಪ್ರತಿಕ್ರಿಯಿಸಿದ ಅವರು, ನಿರ್ಧಿಷ್ಟ ಅಂಕಿ ಅಂಶ ನಮ್ಮ ಬಳಿ ಇಲ್ಲ. ದೇಶಾದ್ಯಂತ ರೊಹಿಂಗ್ಯಾ ಮುಸ್ಲಿಮರು ಚದುರಿದ್ದಾರೆ. ಕೆಲವರು ಮರಳಿ ಬಾಂಗ್ಲಾ ದೇಶಕ್ಕೆ ಹೋಗಿದ್ದಾರೆ. ಶೀಘ್ರವೇ ಈ ಕುರಿತು ಅಂಕಿ ಅಂಶಗಳನ್ನು ಕಲೆ ಹಾಕಲಾಗುವುದು ಎಂದು ಉತ್ತರಿಸಿದರು.

Leave a Reply

Your email address will not be published. Required fields are marked *