Connect with us

Crime

ಕಾರಿನಲ್ಲಿ ಪ್ರೇಯಸಿಯೊಂದಿಗೆ ಪತಿ – ಪತ್ನಿಗೆ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ

Published

on

ಲಕ್ನೋ: ಕಾರಿನಲ್ಲಿ ಪ್ರೇಯಸಿಯೊಂದಿಗಿದ್ದಾಗ ಪತಿ ರೆಡ್‍ಹ್ಯಾಂಡಾಗಿ ಸಿಕ್ಕಿ ಬಿದ್ದರೂ ಹೆಂಡತಿಗೆ ಗುದ್ದಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ನೋಯ್ಡಾದ ಸೆಕ್ಟರ್ 49ರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಿವಾಹಿತ ಮಹಿಳೆಗೆ ಪತಿ ಬೇರೆ ಹುಡುಗಿಯ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಅನುಮಾನವಿತ್ತು. ಅದರಂತೆಯೇ ಪತಿಯನ್ನು ಹಿಂಬಾಲಿಸಿಕೊಂಡು ಪತ್ನಿ ಹೋಗಿದ್ದು, ಪ್ರೇಯಸಿಯೊಂದಿಗೆ ಕಾರಿನಲ್ಲಿದ್ದಾಗಲೇ ಪತಿ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ನಡೆದಿದ್ದೇನು?
ಮಹಿಳೆ ಪ್ರೇಯಸಿಯೊಂದಿಗೆ ಪತಿಯನ್ನು ನೋಡಿದ ತಕ್ಷಣ ಕಾರನ್ನು ಆಟೋದಲ್ಲಿ ಹಿಂಬಾಲಿಸಿದ್ದಾಳೆ. ಆಟೋದಲ್ಲಿ ತೆರಳುವ ವೇಳೆ ಪತಿಗೆ ಫೋನ್ ಮಾಡಿದ್ದಾಳೆ. ಆದರೆ ಪತಿ ಫೋನ್ ರಿಸೀವ್ ಮಾಡಿಲ್ಲ. ಹಾಗಾಗಿ ಕೋಪಗೊಂಡ ಮಹಿಳೆ ಪತಿಯಿದ್ದ ಕಾರನ್ನ ಓವರ್ ಟೇಕ್ ಮಾಡಿ ಕಾರಿನ ಮುಂದೆ ಹೋಗಿ ಆಟೋ ನಿಲ್ಲಿಸಿದ್ದಾಳೆ. ಪತ್ನಿ ಆಟೋದಿಂದ ಕೆಳಗಿಳಿದಿದ್ದಾಳೆ. ಆಗ ಕಾರಿನ ಮುಂದೆ ಪತ್ನಿಯನ್ನು ನೋಡುತ್ತಿದ್ದಂತೆ ಪತಿ ಕಂಗಾಲಾಗಿದ್ದು, ಕಾರಿನಿಂದ ಹೊರಗಿಳಿಯಲು ಪತಿ ಭಯಪಟ್ಟಿದ್ದಾನೆ.

ಪತ್ನಿ ತಕ್ಷಣ ಸಾಕ್ಷಿಗಾಗಿ ತನ್ನ ಫೋನಿನಲ್ಲಿ ಅವರಿಬ್ಬರು ಒಟ್ಟಿಗೆ ಇದ್ದುದ್ದನ್ನು ರೆಕಾರ್ಡ್ ಮಾಡಿಕೊಳ್ಳಲು ಶುರು ಮಾಡಿದ್ದಾಳೆ. ಇದನ್ನು ಕಾರಿನಲ್ಲಿದ್ದ ಪತಿಯ ಪ್ರೇಯಸಿ ನೋಡಿ ಕಿರುಚಾಡಿದ್ದಾಳೆ. ಆಗ ಸ್ಥಳದಲ್ಲಿದ್ದ ಜನರು ಕಾರಿನ ಬಳಿ ಜಮಾಯಿಸಿದ್ದಾರೆ. ಆದರೂ ಪತ್ನಿ ವಿಡಿಯೋ ರೆಕಾರ್ಡ್ ಮಾಡುವುದನ್ನು ನಿಲ್ಲಿಸಲಿಲ್ಲ. ಕೊನೆಗೆ ಪ್ರೇಯಸಿ ಕಾರನ್ನು ಮಹಿಳೆಗೆ ಗುದ್ದಿ ಆಕೆಯ ಪತಿಯೊಂದಿಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಸೆಕ್ಟರ್ 75ರ ಪ್ರದೇಶದಲ್ಲಿ ವಾಸಿಸುತ್ತಿದ್ದು, ಎಂಎನ್‍ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಪತಿ ಐಟಿ ಕಂಪನಿಯಲ್ಲಿ ಕೆಲಸದಲ್ಲಿದ್ದಾನೆ. ಇಬ್ಬರು ಪರಸ್ಪರ ಒಪ್ಪಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವು ದಿನಗಳಲ್ಲೇ ಪತಿ ಬೇರೆ ಯುವತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಪತ್ನಿ ಶಂಕಿಸಿದ್ದಾಳೆ. ಹೀಗಾಗಿ ಅವರಿಬ್ಬರನ್ನು ಹಿಂಬಾಲಿಸುವಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸದ್ಯಕ್ಕೆ ಮಹಿಳೆ ಪತಿ ಮತ್ತು ಆತನ ಪ್ರೇಯಸಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಪತಿ ಮತ್ತು ಆತನ ಪ್ರೇಯಸಿಗಾಗಿ ಶೋಧಕಾರ್ಯ ಶುರುಮಾಡಿದ್ದಾರೆ.