ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ!

ಮಂಡ್ಯ: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಹತ್ಯೆ ಮಾಡಿಸಲು ಪತ್ನಿಯೇ ಹಾಕಿದ್ದ ಸಂಚು ವಿಫಲವಾದ ಘಟನೆ ಜಿಲ್ಲೆಯ ಯಲಿಯೂರು ಗ್ರಾಮದಲ್ಲಿ ನಡೆದಿದೆ.

ರಮೇಶ್ ಪ್ರಾಣಾಪಾಯದಿಂದ ಪಾರಾದ ಪತಿ. ಇವರು ಮೂಲತಃ ಯಲಿಯೂರು ಗ್ರಾಮದವರಾಗಿದ್ದು, ಶಿವಮೊಗ್ಗದಲ್ಲಿ ಜೆಸಿಬಿ ಕೆಲಸ ನಿರ್ವಹಿಸುತ್ತಿದ್ದರು. ರಮೇಶ್ ಹತ್ಯೆಗೆ ಅವರ ಪತ್ನಿಯೇ ಸಂಚು ರೂಪಿಸಿದ್ದಳು. ಅದೃಷ್ಟವಶಾತ್ ಪತಿ ಪ್ರಾಣಾಪಾಯದಿಂದ ಪಾರಾಗಿದ್ದು, ಮಾರಣಾಂತಿಕ ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅನಿಲ್ ಕುಮಾರ್, ಚನ್ನೇಗೌಡ ಹಾಗೂ ಕುಪ್ಪುಸ್ವಾಮಿ ಬಂಧಿತ ಆರೋಪಿಗಳಾಗಿದ್ದು, ಸಂಚು ರೂಪಿಸಿದ್ದ ಪತ್ನಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?
ರಮೇಶ್‍ರ ಪತ್ನಿ ಪ್ರಿಯಕರ ಜೊತೆಗೆ ಮದುವೆಯಾಗಬೇಕೆಂದು, ಪ್ರಿಯಕರನ ಜೊತೆ ಸೇರಿ ಪತಿ ರಮೇಶ್ ಕೊಲೆಗೆ ಸಂಚು ರೂಪಿಸಿದ್ದಳು. ರಮೇಶ್ ಪತ್ನಿ ಹಾಗೂ ಪ್ರಿಯತಮ ಅನಿಲ್‍ಕುಮಾರ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು, ಅನಿಲ್ ಕುಮಾರ್ ರಮೇಶ್ ಪತ್ನಿಯ ಸೋದರಮಾವನಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಅನಿಲ್ ಕುಮಾರು 1 ಲಕ್ಷ ರೂಪಾಯಿಗೆ ಚನ್ನೇಗೌಡ ಹಾಗೂ ಕುಪ್ಪುಸ್ವಾಮಿ ಎಂಬವರಿಗೆ ಸುಪಾರಿ ನೀಡಿದ್ದ. ಪತಿ ಶಿವಮೊಗ್ಗದಿಂದ ಬರುತ್ತಿರುವುದಾಗಿ ಆರೋಪಿಗಳಿಗೆ ಮಾಹಿತಿ ನೀಡಿದ್ದಳು. ರಮೇಶ್ ಮನೆಗೆ ಬರುತ್ತಿರುವಾಗ ಅವರನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.

Leave a Reply

Your email address will not be published. Required fields are marked *