ಸೆಕ್ಸ್‌ಗೆ ಒತ್ತಾಯಿಸಿದ ಎಂಜಿನಿಯರ್ ಪತಿಯನ್ನೇ ಕೊಂದ ಪತ್ನಿ

– ಹಾಲಿನಲ್ಲಿ ನಿದ್ದೆ ಮಾತ್ರೆ ಹಾಕಿ ಕೊಟ್ಟ ಶಿಕ್ಷಕಿ
– ಗಂಡನ ತಲೆಯನ್ನ ಪ್ಲಾಸ್ಟಿಕ್ ಬ್ಯಾಗ್‍ನಿಂದ ಸುತ್ತಿ ಉಸಿರುಗಟ್ಟಿಸಿದ್ಲು

ಚೆನ್ನೈ: ಅಸ್ವಾಭಾವಿಕ ಸೆಕ್ಸ್‌ಗೆ ಒತ್ತಾಯಿಸಿದ ನಂತರ ಮಹಿಳೆಯೊಬ್ಬಳು ತನ್ನ ಸಂಬಂಧಿಕರ ಸಹಾಯದಿಂದ ಪತಿಯನ್ನೇ ಕೊಲೆ ಮಾಡಿರುವ ಘಟನೆ ತಮಿಳುನಾಡಿದ ಮದುರೈನಲ್ಲಿ ನಡೆದಿದೆ.

ಮೃತನನ್ನು ಎಂಜಿನಿಯರ್ ಸುಂದರ್ ಅಲಿಯಾಸ್ ಸುಧೀರ್‌ (34) ಎಂದು ಗುರುತಿಸಲಾಗಿದೆ. ಸುಧೀರ್ ಸಮೀಕ್ಷಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದನು. ಕೊಲೆಯಾದ ದಿನ ಈತ ತನ್ನ ಪತ್ನಿಯ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

- Advertisement -

ಏನಿದು ಪ್ರಕರಣ?
ಮೃತ ಸುಧೀರ್ 8 ವರ್ಷಗಳ ಹಿಂದೆ ಸರ್ಕಾರಿ ಶಾಲಾ ಶಿಕ್ಷಕಿಯಾಗಿರುವ ಅರಿವುಸೆಲ್ವಂ ಜೊತೆ ಮದುವೆಯಾಗಿದ್ದನು. ಈ ದಂಪತಿಗೆ ಒಬ್ಬ ಮಗಳಿದ್ದಾಳೆ. ಶುಕ್ರವಾರ ಆರೋಪಿ ಅರಿವುಸೆಲ್ವಂ ತನ್ನ ಪತಿ ಸುಧೀರ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಹಾಸಿಗೆಯಿಂದ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾನೆ ಎಂದು ವೈದ್ಯರಿಗೆ ತಿಳಿಸಿದ್ದಳು. ವೈದ್ಯರು ಪರೀಕ್ಷಿಸಿ ಸುಧೀರ್‌ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.

- Advertisement -

ಪೊಲೀಸರ ತಂಡವು ಈ ಪ್ರಕರಣದ ಬಗ್ಗೆ ತಿಳಿದು ತನಿಖೆಯನ್ನು ಪ್ರಾರಂಭಿಸಿದ್ದರು. ಈ ವೇಳೆ ಮೃತ ಸುಧೀರ್‌ನ ಖಾಸಗಿ ಭಾಗಗಳಿಗೆ ಗಾಯಗಳಾಗಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಶುಕ್ರವಾರ ಅರಿವುಸೆಲ್ವಂನನ್ನು ವಿಚಾರಣೆ ಮಾಡಿದ್ದಾರೆ. ಆಗ ತನ್ನ ಪತಿಯನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸಂಬಂಧಿಕರಾದ ಬಾಲಮಣಿ ಮತ್ತು ಸುಮಾಯಾರ್ ಇಬ್ಬರ ಸಹಾಯದಿಂದ ಪತಿಯನ್ನು ಕೊಂದಿದ್ದೇನೆ ಎಂದು ಆರೋಪಿ ಶಾಲಾ ಶಿಕ್ಷಕಿ ಪೊಲೀಸರಿಗೆ ತಿಳಿಸಿದ್ದಾಳೆ.

ಪತಿ ಮದ್ಯದ ವ್ಯಸನಿಯಾಗಿದ್ದು, ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದನು. ಅಲ್ಲದೇ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದಾಗ ಸುಧೀರ್ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದನು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಆರೋಪಿ ಗುರುವಾರ ರಾತ್ರಿ ಹಾಲಿನಲ್ಲಿ ನಿದ್ದೆ ಮಾತ್ರೆಗಳನ್ನು ಮಿಕ್ಸ್ ಮಾಡಿ ಪತಿಗೆ ಕೊಟ್ಟಿದ್ದಾಳೆ. ನಂತರ ಮಹಿಳೆ ಬಾಲಮಣಿ ಮತ್ತು ಸುಮಾಯಾರ್ ಇಬ್ಬರನ್ನು ತನ್ನ ಮನೆಗೆ ಕರೆದಿದ್ದಾಳೆ. ಬಳಿಕ ಮೂವರು ಆರೋಪಿಗಳು ಸುಧೀರ್‌ನ ತಲೆಯನ್ನು ಪ್ಲಾಸ್ಟಿಕ್ ಬ್ಯಾಗ್‍ನಿಂದ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಈ ವೇಳೆ ಸುಮಾಯರ್ ಸುಧೀರ್‌ನ ಖಾಸಗಿ ಭಾಗಗಳ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯಕ್ಕೆ ಈ ಕುರಿತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -