Tuesday, 21st May 2019

ಬಿಸಿ ಕುಕ್ಕರ್ ನಿಂದ ಹಲ್ಲೆಗೈದು ಟೆಕ್ಕಿ ಪತಿಯ ಕೈ ಮುರಿದ ಪತ್ನಿ..!

ಮುಂಬೈ: ಪತ್ನಿ ತನಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾಳೆ. ಅಲ್ಲದೇ ಚಿಕ್ಕ ವಾಗ್ವಾದ ನಡೆದಿದ್ದಕ್ಕೆ ಬಿಸಿಯಾಗಿದ್ದ ಕುಕ್ಕರ್ ನಿಂದ ಹಲ್ಲೆಗೈದು ನನ್ನ ಕೈ ಮುರಿದು ಹಾಕಿದ್ದಾಳೆ ಎಂದು ಪತಿಯೊಬ್ಬ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ನನ್ನ ಪತ್ನಿ ಹಲವು ವರ್ಷಗಳಿಂದ ನನಗೆ ಕಾರಣವಿಲ್ಲದೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಪತಿ ಆರೋಪಿಸುತ್ತಿದ್ದಾರೆ. ಪತಿಯ ಆರೋಪಗಳನ್ನು ಕೇಳಿ ಈ ರೀತಿ ಮಾಡದಂತೆ ಕೋರ್ಟ್ ಪತ್ನಿಗೆ ಎಚ್ಚರಿಕೆ ನೀಡಿದೆ. ದೂರು ನೀಡಿದ ಪತಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ದಂಪತಿಗೆ ಬಾಲ್ಯದಿಂದಲೂ ಒಬ್ಬರನೊಬ್ಬರ ಪರಿಚಯವಿತ್ತು. ಅಲ್ಲದೇ ಇಬ್ಬರು 1998ರಲ್ಲಿ ಮದುವೆ ಆಗಿದ್ದರು.

ನಮ್ಮಿಬ್ಬರ ನಡುವಿನ ಸಂಬಂಧ ಚೆನ್ನಾಗಿತ್ತು. ಆದರೆ ಕೆಲವು ತಿಂಗಳಿನಿಂದ ನನ್ನ ಪತ್ನಿ ಚಿಕ್ಕ-ಚಿಕ್ಕ ವಿಷಯಗಳಿಗೆ ನನ್ನ ಜೊತೆ ಜಗಳವಾಡುತ್ತಿದ್ದಾಳೆ. ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾಳೆ. ಅಲ್ಲದೆ ಕೆಟ್ಟದಾಗಿ ನಿಂದಿಸುತ್ತಿರುತ್ತಾಳೆ. ಕೆಲವು ಬಾರಿ ನಾನು ಆಕೆಯನ್ನು ಹುಡುಕಬೇಕೆಂದು ಆಕೆ ಬೇಕೆಂದಲೇ ಮನೆಯಿಂದ ಹೊರ ಹೋಗುತ್ತಿದ್ದಳು ಎಂದು ಪತಿ ತನ್ನ ಪತ್ನಿ ವಿರುದ್ಧ ಆರೋಪಿಸಿದ್ದಾರೆ.

ಸುಳ್ಳು ದೂರು ದಾಖಲು:
ನನ್ನ ಪತ್ನಿ 2016ರಲ್ಲಿ ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಐಪಿಸಿ ಸೆಕ್ಷನ್ 498 ಅಡಿಯಲ್ಲಿ ಸುಳ್ಳು ದೂರು ದಾಖಲಿಸಿದ್ದಳು. ಹಿಂಸಾಚಾರ ಕಾಯ್ದೆ ಅಡಿಯಲ್ಲಿ ನನ್ನ ವಿರುದ್ಧ ಕೋರ್ಟ್‍ನಲ್ಲಿ ದೂರು ದಾಖಲಿಸಿದ್ದಳು. ನನ್ನ ಪತ್ನಿಯ ಕಾಟ ತಡೆಯಲು ಸಾಧ್ಯವಾಗುತ್ತಿಲ್ಲ. ನನ್ನ ಮಕ್ಕಳನ್ನೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆಕೆ ಮಕ್ಕಳ ಬಳಿ ನನ್ನ ವಿರುದ್ಧ ಮಾತನಾಡಿ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಬರುವ ರೀತಿ ಮಾಡುತ್ತಿದ್ದಾಳೆ. ಮಕ್ಕಳ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ ಎಂಬುದನ್ನು ಕೂಡ ನೋಡಲು ಆಕೆ ಬಿಡುತ್ತಿಲ್ಲ.

ನನ್ನ ಪತ್ನಿ ನನ್ನ ಜೊತೆ ಜಗಳವಾಡಲು ಚಿಕ್ಕ ಕಾರಣ ಹುಡುಕುತ್ತಾಳೆ. ಬಳಿಕ ಮನೆಯಲ್ಲಿರುವ ವಸ್ತುಗಳಿಂದ ನನ್ನ ಮೇಲೆ ಹಲ್ಲೆ ಮಾಡುತ್ತಾಳೆ. ಜನವರಿ 21ರಂದು ಆಕೆ ನನಗೆ ಬಿಸಿ ಕುಕ್ಕರ್‍ನಿಂದ ಹಲ್ಲೆ ಮಾಡಿದ್ದಳು. ಇದರಿಂದ ನನ್ನ ಕೈ ಮುರಿದು ಹೋಗಿದೆ. ನನಗೆ ಕಿರುಕುಳ ನೀಡಲು ಆಕೆ ಈ ರೀತಿ ಮಾಡುತ್ತಿದ್ದಾಳೆ. ಆಕೆಯ ವರ್ತನೆಯಿಂದ ನನ್ನ ಮಕ್ಕಳು ಅವರ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನನಗೆ ಭಯ ಆಗುತ್ತಿದೆ ಎಂದು ಪತಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *