Bengaluru City
ಅಕ್ಕನ ಜೊತೆಗೆ ಜಗಳ ತೆಗೆದ ಬಾವನ ಹತ್ಯೆಗೈದ ಬಾಮೈದ

ಬೆಂಗಳೂರು: ಅಕ್ಕನ ಜೊತೆ ಜಗಳ ತೆಗೆದ ಭಾವನನ್ನ ಭೀಕರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರಿನ ನಂದಿನಿ ಬಡಾವಣೆಯ ಕಂಠೀರವ ನಗರ ರಸ್ತೆಯಲ್ಲಿ ನಡೆದಿದೆ.
ಅಜೀಮ್ ಉಲ್ಲಾ ಕೊಲೆಯಾದ ವ್ಯಕ್ತಿ. ಅಜೀಮ್ ಪತ್ನಿಯೊಂದಿಗೆ ನಂದಿನಿ ಬಡಾವಣೆಯಲ್ಲಿ ವಾಸವಾಗಿದ್ದನು. ಆದ್ರೆ ಪದೇ ಪದೇ ಪತ್ನಿ ಜೊತೆ ಅಜೀಮ್ ಜಗಳ ಮಾಡಿಕೊಳ್ಳುತ್ತಿದ್ದನು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಕನ ಕಷ್ಟ ನೋಡದ ತಮ್ಮ ಖಾದರ್ ಭಾನುವಾರ ರಾತ್ರಿ ಬಾವನನ್ನು ಕೊಲೆಗೈದಿದ್ದಾನೆ. ಕೊಲೆಯ ಬಳಿಕ ಖಾದರ್ ಪರಾರಿಯಾಗಿದ್ದಾನೆ.
ನಡೆದಿದ್ದು ಏನು?: ಸಂಜೆ ಐದು ಗಂಟೆಗೆ ಮನೆಗೆ ಬಂದ ಅಜೀಮ್ ಪತ್ನಿ ಜೊತೆ ಜಗಳ ಮಾಡಲು ಆರಂಭಿಸಿದ್ದನು. ಜಗಳದ ವಿಷಯ ತಿಳಿದ ಖಾದರ್ ಕೂಲಿ ನಗರದಿಂದ ಗೆಳೆಯರ ಜೊತೆ ಅಕ್ಕನ ಮನೆಗೆ ಬಂದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ರಾತ್ರಿ ಸುಮಾರು 11.30ಕ್ಕೆ ಕಲ್ಲಿನಿಂದ ಅಜೀಮ್ ತಲೆಯನ್ನ ಜಜ್ಜಿ ಖಾದರ್ ಕೊಲೆ ಮಾಡಿದ್ದಾನೆ.
ಸಾರ್ವಜನಿಕರು ಕೊಲೆಯ ವಿಷಯವನ್ನು ನಂದಿನಿ ಲೇಔಟ್ ಠಾಣೆ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನ ಆಸ್ಪತ್ರೆಗೆ ರವಾನಿಸಿದ್ದು, ಎಸ್ಕೇಪ್ ಆಗಿರುವ ಖಾದರ್ ಬಂಧನಕ್ಕೆ ಬಲೆ ಬೀಸಿದ್ದಾರೆ.
