Monday, 16th December 2019

ಒಂದೇ ಒಂದು ಪಿಸ್ತೂಲಿನಿಂದ ದಾಬೋಲ್ಕರ್, ಕಲ್ಬುರ್ಗಿ, ಗೌರಿ ಹತ್ಯೆ!

– ಎಸ್‍ಐಟಿ ಅಧಿಕಾರಿಗಳಿಗೆ ಸಿಕ್ಕಿದೆ ಸ್ಫೋಟಕ ಮಾಹಿತಿ
– ಹತ್ಯೆಗೆ ಕಲ್ಬುರ್ಗಿ ಹೇಳಿಕೆ ಕಾರಣ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಪೊಲೀಸರಿಗೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ. ಪ್ರಗತಿ ಪರರಾದ ನರೇಂದ್ರ ದಾಬೋಲ್ಕರ್, ಎಂ.ಎಂ. ಕಲ್ಬುರ್ಗಿ ಹಾಗು ಪತ್ರಕರ್ತೆ ಗೌರಿ ಲಂಕೇಶ್ ಮೂವರ ಹತ್ಯೆಯನ್ನು ಒಂದೇ ಪಿಸ್ತೂಲ್ ನಿಂದ ಮಾಡಲಾಗಿದೆ ಎಂಬ ರೋಚಕ ಮಾಹಿತಿ ಈಗ ಬೆಳಕಿಗೆ ಬಂದಿದೆ.

ಮೂವರು ಪ್ರಗತಿಪರರನ್ನು ಒಂದೇ ಪಿಸ್ತೂಲ್ ನಿಂದ ಹತ್ಯೆ ಮಾಡಿದರೆ ಗೋವಿಂದ್ ಪನ್ಸಾರೆ ಹತ್ಯೆಗೆ ಬೇರೆ ಪಿಸ್ತೂಲ್ ಬಳಸಲಾಗಿದೆ ಎನ್ನುವ ಮಾಹಿತಿ ಎಸ್‍ಐಟಿ ಮೂಲಗಳಿಂದ ತಿಳಿದು ಬಂದಿದೆ. ಗೌರಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಬೈಕ್ ರೈಡರ್ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ವಿಚಾರಣೆ ವೇಳೆ ತಿಳಿಸಿದ ಮಾಹಿತಿಯಿಂದ ಕಲ್ಬುರ್ಗಿ ಹತ್ಯೆಯ ಮಾಹಿತಿ ಈಗ ಬೆಳಕಿಗೆ ಬಂದಿದೆ.

ಕಲ್ಬುರ್ಗಿ ಹಂತಕ ಯಾರು?: ಸಾಹಿತಿ ಹಾಗು ಪ್ರಗತಿಪರ ಚಿಂತಕರಾದ ಧಾರವಾಡದ ಎಂ.ಎಂ.ಕಲ್ಬುರ್ಗಿ ಅವರಿಗೆ ಗುಂಡಿಟ್ಟಿದ್ದು ಅಮೋಲ್ ಕಾಳೆ ಎನ್ನಲಾಗಿದೆ. ಅಮೋಲ್ ಕಾಳೆ ಮಹಾರಾಷ್ಟ್ರ ಮತ್ತು ಕರ್ನಾಟಕ ಆಪರೇಷನ್ ಗಳಿಗೆ ಮುಖ್ಯಸ್ಥನಾಗಿದ್ದು ಕಲ್ಬುರ್ಗಿ ಅವರ ವಿವಾದಾತ್ಮಕ ಹೇಳಿಕೆಯೇ ಕೊಲೆಗೆ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ. ಕಲ್ಬುರ್ಗಿ ಅವರ ಮನೆ ಬಾಗಿಲು ತಟ್ಟಿದ ಅಮೋಲ್ ಕಾಳೆ, ಅವರು ಹೊರ ಬಂದ ಕೂಡಲೇ ಗುಂಡು ಹಾರಿಸಿದ್ದನು. ನಂತರ ಅಲ್ಲಿಂದ ಬೈಕ್ ಮುಖಾಂತರ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

ಕಲ್ಬುರ್ಗಿ ಅವರನ್ನು ಕೊಲ್ಲಲು ಕಾಕಾ ಅಲಿಯಾಸ್ ಶಂಕರ್ ನಾರಾಯಣ್ ಎಂಬಾತನೇ ಹೇಳಿದ್ದನಂತೆ. ಕಾಕಾನ ಆಜ್ಞೆಯಂತೆಯೇ ಅಮೋಲ್ ಕಾಳೆ ಕೊಲೆ ಮಾಡಿದ್ದನು. ಕಾಕಾ ಆರು ತಿಂಗಳ ಹಿಂದೆಯೇ ಸಾವನ್ನಪ್ಪಿದ್ದು, ಆತನ ಬಲಗೈ ಬಂಟನೇ ಗೌರಿ ಹತ್ಯೆಗೆ ಸಂಚು ರೂಪಿಸಿದ್ದನಂತೆ. ಕಾಕಾನ ಬಲಗೈ ಬಂಟ ಮಹಾರಾಷ್ಟ್ರದ ಸಂಘಟನೆಯೊಂದು ಕಟ್ಟಾಳು ಎಂಬ ವಿಚಾರ ತಿಳಿದು ಬಂದಿದೆ. ಅರೋಪಿಗಳ ಬಳಿ ಒಟ್ಟು 12 ಪಿಸ್ತೂಲ್ ಗಳಿದ್ದು, ಒಂದನ್ನು ಕೊಲೆಗಾಗಿ ತೆಗೆದಿರಿಸಿದ್ದರು. ಗುರುವಾರ ವಶಕ್ಕೆ ಪಡೆದಿರುವ ಪಿಸ್ತೂಲ್ ನ್ನು ಗುಜರಾತ್ ನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಈಗ ಕಳುಹಿಸಲಾಗಿದೆ.

ಹತ್ಯೆಗೆ ಕಲ್ಬುರ್ಗಿ ಹೇಳಿಕೆ ಕಾರಣ:
`ದೇವರ ವಿಗ್ರಹದ ಮೂತ್ರ ವಿಸರ್ಜನೆ ಮಾಡಿದರೂ ನನಗೇನೂ ಆಗಲಿಲ್ಲ’ ಎಂದು ಕಲ್ಬುರ್ಗಿಯವರು ಈ ಹಿಂದೆ ಹೇಳಿದ್ದರು. ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ಬಲಪಂಥೀಯ ವಿಚಾರಗಳನ್ನು ಖಂಡಿಸಿ ಭಾಷಣ ಮಾಡುತ್ತಿದ್ದರು. ಹಿಂದೂ ಧರ್ಮದ ವಿರುದ್ಧ ಭಾಷಣ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಾವು ಅವರ ಕೊಲೆ ಮಾಡಿದ್ದೆವು ಎಂದು ಗಣೇಶ್ ಮಿಸ್ಕಿನ್ ತಪ್ಪೊಪ್ಪಿಗೆ ನೀಡಿದ್ದಾನೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *