Sunday, 19th May 2019

ಕಾರು ಬಾಂಬ್ ಸೇನೆಗೆ ಹೊಸ ತಲೆನೋವಾಗಿದ್ದು ಹೇಗೆ? ಏನಿದು ವಿಬಿಐಇಡಿ?

ನವದೆಹಲಿ: ದೇಶದ ಸೇನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಉಗ್ರರು ಕಾರು ಆತ್ಮಹತ್ಯಾ ಬಾಂಬರ್ ಮೂಲಕ ದಾಳಿ ಮಾಡಿದ್ದಾರೆ. ಪುಲ್ವಾಮದಲ್ಲಿ ಉಗ್ರರು ಬಳಿಸಿದ ತಂತ್ರಜ್ಞಾನವನ್ನು VEHICLE-BORNE IMPROVISED EXPLOSIVE DEVICE (VBIED) ಎಂದು ಕರೆಯಲಾಗುತ್ತದೆ. ಹೀಗಾಗಿ ಏನಿದು ತಂತ್ರಗಾರಿಕೆ? ಯಾವ ರೀತಿ ಬಳಕೆ ಮಾಡುತ್ತಾರೆ ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಹೇಗೆ ಬಳಕೆ ಮಾಡಲಾಗುತ್ತದೆ?:
ವಿಬಿಐಇ ಸ್ಫೋಟಕಗಳನ್ನು ಅಳವಡಿಸಿರುವ ವಾಹನಗಳನ್ನು ಸ್ಫೋಟ ಮಾಡಲು ಹಲವು ತಂತ್ರಗಳನ್ನು ಬಳಕೆ ಮಾಡಲಾಗುತ್ತದೆ. ಪ್ರಮುಖವಾಗಿ ವಾಹನ ಚಾಲಕನ ಡೋರ್ ಓಪನ್ ಮಾಡುತ್ತಿದ್ದಾಗ, ವಾಹನ ವೇಗ ಹೆಚ್ಚಾಗುತ್ತಿದಂತೆ, ವಾಹನ ಇಗ್ನಿಷನ್ ಆಫ್ ಅಥವಾ ಆನ್ ಮಾಡುವುದು, ಪಾರ್ಕ್ ಮಾಡಿರುವ ವಾಹನ ಸ್ಫೋಟಕ್ಕೆ ಸಮಯ ನಿಗದಿ ಪಡಿಸುವುದು. ಈ ಎಲ್ಲಾ ಮಾರ್ಗಗಳ ಮೂಲಕ ಸ್ಫೋಟ ಆಗುವಂತೆ ಮಾಡಬಹುದು. ಪುಲ್ವಾಮಾ ದಾಳಿಯಲ್ಲಿ ಉಗ್ರರು ಕಾರಿನ ವೇಗವನ್ನು ಹೆಚ್ಚಿಸಿ ವಾಹನವನ್ನು ಡಿಕ್ಕಿ ಮಾಡುವ ತಂತ್ರವನ್ನು ಬಳಕೆ ಮಾಡಿದ್ದರು.

ಎಲ್ಲಿ ಅಳವಡಿಸಲಾಗುತ್ತದೆ?:
ಸ್ಫೋಟಕಗಳನ್ನು ಭಾರೀ ಪ್ರಮಾಣದಲ್ಲಿ ಬಳಕೆ ಮಾಡುವ ಉದ್ದೇಶದಿಂದ ವಾಹನ ಮುಂಭಾಗ ಅಂದರೆ ಕಾಲು ಇಡುವ ಭಾಗದಲ್ಲಿ ಹಾಗೂ ವಾಹನ ಹಿಂಭಾಗ ಬೂಟ್ ಸ್ಪೇಸ್, ಹಿಂಭಾಗದ ಸಿಟ್ ಕೆಳಗೆ ಸ್ಫೋಟಗಳನ್ನು ಅಳವಡಿಸಿರುತ್ತಾರೆ. ತಜ್ಞರ ಮಾಹಿತಿ ಅನ್ವಯ ಸ್ಫೋಟಗಳನ್ನು ವಾಹನ ಇಂಧನ ಸಂಗ್ರಹಣ ಪ್ರದೇಶದಲ್ಲೇ ಹೆಚ್ಚು ಅಳವಡಿಸಲಾಗುತ್ತದೆ. ಸ್ಫೋಟಕಗಳ ಸ್ಫೋಟದೊಂದಿಗೆ ಡಿಸೇಲ್, ಪೆಟ್ರೋಲ್ ಕೂಡ ಸ್ಫೋಟದ ತೀವ್ರತೆಯನ್ನು ಹೆಚ್ಚಿಸುತ್ತದೆ.

ಐಇಡಿ ಗಳನ್ನೇ ಏಕೆ ಬಳಸಲಾಗುತ್ತದೆ?
ವಿಧ್ವಂಸಕ ಕೃತ್ಯಗಳನ್ನು ನಡೆಸುವ ಉದ್ದೇಶದೊಂದಿಗೆ ಭಾರೀ ಸ್ಫೋಟ ನಡೆಸುವ ಕಾರಣ ಐಇಡಿಗಳನ್ನು ಬಳಕೆ ಮಾಡಲಾಗುತ್ತದೆ. ಪಾಕ್ ಉಗ್ರರಿಗೆ ಐಇಡಿ ತಯಾರಿಸಲು ವಸ್ತುಗಳು ಸುಲಭವಾಗಿ ಸಿಗುತ್ತದೆ. ಆದರೆ ವಾಹನದಲ್ಲಿ ಐಇಡಿ ಅಳವಡಿಸಲು ಹೆಚ್ಚಿನ ಪರಿಣತಿ ಅಗತ್ಯವಿರುತ್ತದೆ. ಹೆಚ್ಚಿನ ಸಂಪನ್ಮೂಲ, ಹೆಚ್ಚು ಹಣ ಕೂಡ ಅಗತ್ಯವಿರುತ್ತದೆ.

ಪತ್ತೆ ಹಚ್ಚುವುದು ಹೇಗೆ?
ಅನುಮಾನ ವ್ಯಕ್ತವಾದ ವಾಹನಗಳ ಪರಿಶೀಲನೆ ಮಾಡುವುದು, ಐಇಡಿಗಳನ್ನು ಪತ್ತೆ ಹಚ್ಚುವಂತಹ ಚೆಕ್ ಪಾಯಿಂಟ್ ಗಳನ್ನು ನಿರ್ಮಿಸುವುದು. ಅಲ್ಲದೇ ಭಾರೀ ಪ್ರಮಾಣದಲ್ಲಿ ಸ್ಫೋಟಗಳ ಸಂಗ್ರಹಣೆ ಹಾಗೂ ಬಳಕೆ ಬಗ್ಗೆ ಗುಪ್ತಚರ ಮಾಹಿತಿಯನ್ನು ಪಡೆಯುವುದು. ಸ್ಫೋಟಕಗಳನ್ನು ಡಿಕೋಡ್ ಮಾಡುವಂತಹ ಆಧುನಿಕ ಪೊಲೀಸ್ ತಂಡವನ್ನು ನೇಮಿಸುವ ಮೂಲಕ ಪತ್ತೆ ಹಚ್ಚಬಹುದು.

ಐಇಡಿಯನ್ನು ಪತ್ತೆ ಹಚ್ಚಿದ ಮಾತ್ರಕ್ಕೆ ಕೃತ್ಯ ತಡೆಯಬಹುದು ಎಂದು ಹೇಳಲು ಸಾಧ್ಯವಿಲ್ಲ. ಉಗ್ರರ ಉದ್ದೇಶವೇ ಸೈನಿಕರ ಮೇಲೆ ದಾಳಿ ಮಾಡುವುದು.ಹೀಗಾಗಿ ರಕ್ಷಣಾ ಪಡೆಗಳು ತಡೆಯುತ್ತಿರುವ ವೇಳೆಯೇ ಸ್ಫೋಟಿಸಿದ ಉದಾಹರಣೆಗಳು ವಿದೇಶದಲ್ಲಿ ನಡೆದಿದೆ. ಇಷ್ಟೆಲ್ಲ ಆಗಿಯೂ ಐಇಡಿಯನ್ನು ನಿಷ್ಕ್ರಿಯಗೊಳಿಸುವುದು ಸುಲಭದ ಮಾತಲ್ಲ. ಕಡಿಮೆ ಅವಧಿಯಲ್ಲಿ ಇದನ್ನು ನಿಷ್ಕ್ರಿಯಗಳಿಸುವುದು ಸವಾಲಿನ ಕೆಲಸವು ಹೌದು.

ಎಲ್ಲಿ ಜಾಸ್ತಿ?
ವಿಶ್ವದಲ್ಲಿ ಇಂತಹ ತಂತ್ರಜ್ಞಾನವನ್ನು ಬಳಸಿ ಅಫ್ಘಾನಿಸ್ತಾನ ಹಾಗೂ ಇರಾನ್ ದೇಶಗಳಲ್ಲಿ ಉಗ್ರರು ಸ್ಫೋಟ ಮಾಡುವುದು ಸಾಮಾನ್ಯವಾಗಿದೆ. ಉನ್ನತ ಮಟ್ಟದ ಪರಿಣತಿಯನ್ನು ಹೊಂದಿರುವವರು ಮಾತ್ರ ಇಂತಹ ಸ್ಫೋಟ ನಡೆಸಲು ಸ್ಕೆಚ್ ಹಾಕುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *