Tuesday, 17th September 2019

Recent News

ಇಂದು ಎನ್‍ಡಿಎ ಮಿತ್ರಪಕ್ಷಗಳ ಜೊತೆ ಮೋದಿ, ಷಾ ಸಭೆ- ರಾಷ್ಟ್ರಪತಿ ಆಯ್ಕೆಗೆ ಚರ್ಚೆ

– ಎಸ್‍ಎಂ ಕೃಷ್ಣ ಆಗ್ತಾರಾ ಉಪರಾಷ್ಟ್ರಪತಿ?

ನವದೆಹಲಿ: ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದು ಸಂಜೆ ಎನ್‍ಡಿಎ ಮೈತ್ರಿಕೂಟದ ಎಲ್ಲಾ 32 ಮಿತ್ರಪಕ್ಷಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳನ್ನ ಭೇಟಿ ಮಾಡಲಿದ್ದಾರೆ.

ಮೋದಿ 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದು ಎರಡನೇ ಸಭೆಯಾಗಿದ್ದು, ಸರ್ಕಾರದ ಮುಂದಿನ ತಂತ್ರಗಾರಿಕೆ ಬಗ್ಗೆ ನಿರ್ಧರಿಸಲು ಈ ಸಭೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಮುಂದಿನ ರಾಷ್ಟ್ರಪತಿ ಯಾರಾಗಬೇಕೆಂಬ ಬಗ್ಗೆಯೇ ಸಭೆಯಲ್ಲಿ ಹೆಚ್ಚಿನ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಶಿವಸೇನೆ ಹಾಗೂ ಬಿಜೆಪಿ ಮಧ್ಯೆ ಆಗಾಗ ವೈಮನಸ್ಸು ಕಾಣಿಸಿಕೊಂಡಿದ್ದರೂ ಶಿವಸೇನೆ ಮುಖ್ಯಸ್ಥರಾದ ಉದ್ಧವ್ ಠಾಕ್ರೆ ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ವರದಿಯಾಗಿದೆ. ಅಲ್ಲದೆ ತೆಲುಗುದೇಶಂ ಪಕ್ಷದ ಮುಖ್ಯಸ್ಥರು ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಮತ್ತು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೂಡ ಸಭೆಯಲ್ಲಿ ಹಾಜರಿರಲಿದ್ದಾರೆ.

ಪ್ರಧಾನಿ ಮೋದಿ ಬಯಸಿದ ವ್ಯಕ್ತಿ ರಾಷ್ಟ್ರಪತಿ ಕುರ್ಚಿಯ ಮೇಲೆ ಕೂರಬೇಕಾದ್ರೆ, ಎಲ್ಲಾ ಪಕ್ಷಗಳ ಬೆಂಬಲ ಅಗತ್ಯ ಎಂಬುದು ಎನ್‍ಡಿಎ ನಾಯಕರಿಗೆ ತಿಳಿದಿದೆ. ಜುಲೈ 25ರ ಒಳಗೆ ದೇಶದ ಮುಂದಿನ ರಾಷ್ಟ್ರಪತಿಯನ್ನು ಆಯ್ಕೆ ಮಾಡಬೇಕಿದ್ದು, ಬಿಜೆಪಿ ಈಗಾಗಲೇ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ತೊಡಗಿದೆ ಎಂದು ವರದಿಯಾಗಿದೆ.

ಸಂಭಾವ್ಯ ಸ್ಪರ್ಧಿಗಳು ಯಾರು?

1. ಎಲ್‍ಕೆ ಅಡ್ವಾಣಿ
ರಾಜಕೀಯ ವಲಯದ ಮಾತುಗಳ ಪ್ರಕಾರ ಬಿಜೆಪಿಯ ಹಿರಿಯ ನಾಯಕರಾದ ಎಲ್‍ಕೆ ಅಡ್ವಾಣಿ ಅವರು ಮುಂದಿನ ರಾಷ್ಟ್ರಪತಿ ಆಗಬೇಕೆಂಬುದು ಪ್ರಧಾನಿ ಮೋದಿ ಅವರ ಆಶಯ ಎಂದು ಹೇಳಲಾಗಿದೆ. ಗುಜರಾತ್‍ನ ಸೋಮನಾಥ್‍ನಲ್ಲಿ ನಡೆದ ಸಭೆಯಲ್ಲಿ ಮೋದಿ, ಅಡ್ವಾಣಿ ಅವರ ಹೆಸರನ್ನು ಸೂಚಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅಡ್ವಾಣಿ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡುವುದು ಅವರಿಗೆ ನಾವು ಗುರು ದಕ್ಷಿಣೆ ನೀಡಿದಂತೆ ಎಂದು ಮೋದಿ ಹೇಳಿದ್ದರು ಎನ್ನಲಾಗಿದೆ.

2. ಮೋಹನ್ ಭಾಗವತ್
ಆರ್‍ಎಸ್‍ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್, ರಾಷ್ಟ್ರಪತಿ ಹುದ್ದೆಯ ರೇಸ್‍ನಲ್ಲಿರುವ ಬಗ್ಗೆ ವರದಿಗಳನ್ನ ತಳ್ಳಿಹಾಕಿದ್ದರೂ ಕೂಡ ಇವರ ಹೆಸರು ಸಂಭಾವ್ಯ ರಾಷ್ಟ್ರಪತಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಭಾರತವನ್ನ ಹಿಂದೂ ರಾಷ್ಟ್ರ ಮಾಡಬೇಕಿದ್ದರೆ ರಾಷ್ಟ್ರಪತಿ ಸ್ಥಾನಕ್ಕೆ ಭಾಗವತ್ ಅವರೇ ಸೂಕ್ತ ಆಯ್ಕೆ. ಆದರೆ ಈ ನಿರ್ಧಾರವನ್ನು ಉದ್ಧವ್ ಠಾಕ್ರೆ ತೆಗೆದುಕೊಳ್ಳಲಿದ್ದಾರೆ ಎಂದು ಶಿವಸೇನಾ ಮುಖಂಡರಾದ ಸಂಜಯ್ ರೌತ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಭಾಗವತ್, ನಾವು ಸಂಘ ಹಾಗೂ ಸಮಾಜಕ್ಕಾಗಿ ಮಾತ್ರ ಕೆಲಸ ಮಾಡುತ್ತೇವೆ. ರಾಷ್ಟ್ರಪತಿ ಹುದ್ದೆಗೆ ನನ್ನ ಹೆಸರು ಬರುವುದಿಲ್ಲ. ಒಂದು ವೇಳೆ ನನ್ನ ಹೆಸರನ್ನು ಸೂಚಿಸಿದ್ರೂ ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿ ರೌತ್ ಅವರ ಸಲಹೆಯನ್ನು ತಿರಸ್ಕರಿಸಿದ್ದರು.

3. ಸುಮಿತ್ರಾ ಮಹಾಜನ್
ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನೂ ಕೂಡ ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಪರಿಗಣಿಸಲಿದೆ ಎಂದು ಹೇಳಲಾಗಿದೆ. ಆಡಳಿತ ಪಕ್ಷ ಬಿಜೆಪಿಯೊಂದಿಗಿನ ಸುಮಿತ್ರಾ ಮಹಾಜನ್ ಅವರ ಉತ್ತಮ ಸಂಬಂಧ ಹಾಗೂ ಅವರು ಲೋಕಸಭೆಯನ್ನು ಸಮರ್ಪಕವಾಗಿ ನಿರ್ವಹಿಸುವ ರೀತಿ ಮಹಾಜನ್ ಪರವಾಗಿ ಕಲಸ ಮಾಡಬಹುದು ಎಂದು ಅಭಿಪ್ರಾಯಿಸಲಾಗಿದೆ.

4. ದ್ರೌಪದಿ ಮುರ್ಮು
ಉತ್ತರಪ್ರದೇಶ ಹಾಗೂ ಗುಜರಾತ್‍ನಲ್ಲಿ ಸಿಎಂ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬ ಪ್ರಶ್ನೆ ಬಂದಾಗ ಹಲವರ ಹೆಸರು ಕೇಳಿ ಬಂದಿತ್ತು. ಆದ್ರೆ ಉತ್ತರಪ್ರದೇಶಕ್ಕೆ ಯೋಗಿ ಆದಿತ್ಯನಾಥ್ ಅವರನ್ನ ಹಾಗೂ ಗುಜರಾತ್‍ಗೆ ವಿಜಯ್ ರುಪಾನಿ ಅವರನ್ನ ಸಿಎಂ ಆಗಿ ಆಯ್ಕೆ ಮಾಡಿದ್ದು ಆಶ್ಚರ್ಯ ತಂದಿತ್ತು. ಇದೇ ರೀತಿ ಜಾರ್ಖಂಡ್ ರಾಜ್ಯಪಾಲರಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಆಯ್ಕೆ ಮಾಡಲೂಬಹುದು ಎಂದು ಹೇಳಲಾಗಿದೆ. ಮುರ್ಮು ಅವರು ಒಡಿಶಾದಿಂದ ಎರಡು ಬಾರಿ ಬಿಜೆಪಿ ಶಾಸಕಿಯಾಗಿದ್ದರು. ಅಲ್ಲದೆ ನವೀನ್ ಪಟ್ನಾಯಕ್ ಅವರ ಸಂಪುಟದಲ್ಲಿ ಸಚಿವೆ ಕೂಡ ಆಗಿದ್ದರು.

5. ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು, ಎಸ್‍ಎಂ ಕೃಷ್ಣ
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಕಾರ್ಯ ವೈಖರಿ ಮೂಲಕವೇ ವಿರೋಧ ಪಕ್ಷಗಳಿಂದಲೂ ಪ್ರಶಂಸೆ ಗಳಿಸಿದ್ದಾರೆ. ಈ ನಡುವೆ ಅವರ ಆರೋಗ್ಯ ಸರಿಯಿಲ್ಲದ ಕಾರಣವನ್ನು ಪರಿಗಣಿಸಿ ಬಿಜೆಪಿ, ಸುಷ್ಮಾ ಅವರ ಕೆಲಸದ ಭಾರವನ್ನ ಕಡಿಮೆ ಮಾಡಲು ಅವರನ್ನ ಉನ್ನತ ಹುದ್ದೆಗೆ ಆಯ್ಕೆ ಮಾಡಲೂಬಹುದು ಎನ್ನಲಾಗಿದೆ.

ಅಲ್ಲದೆ ಉಪ ರಾಷ್ಟ್ರಪತಿ ಹುದ್ದೆಗೆ ಹಿರಿಯ ಸಚಿವ ವೆಂಕಯ್ಯ ನಾಯ್ಡು ಹಾಗೂ ಇತ್ತೀಚೆಗೆ ಬಿಜೆಪಿ ಸೇರಿದ ಕರ್ನಾಟಕದ ಮಾಜಿ ಸಿಎಂ ಎಸ್‍ಎಂ ಕೃಷ್ಣ ಅವರ ಹೆಸರುಗಳು ಕೇಳಿಬರುತ್ತಿವೆ. ದಕ್ಷಿಣ ಭಾರತದಲ್ಲಿ ಪಕ್ಷವನ್ನ ವಿಸ್ತರಿಸಬೇಕು ಎಂದುಕೊಂಡಿರುವ ಬಿಜೆಪಿ, ಈ ಇಬ್ಬರಿಗೆ ಉಪ ರಾಷ್ಟ್ರಪತಿ ಹುದ್ದೆ ನೀಡಿದ್ರೆ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಮತದಾರರನ್ನ ಸೆಳೆಯಬಹುದು ಎಂದು ಉದ್ದೇಶಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *