Connect with us

Districts

ಚುನಾವಣೆ ವೇಳೆ ಸಿನಿಮಾದವ್ರು ಬಂದಿದ್ರು ಈಗ ಎಲ್ಲಿ ಹೋದ್ರು? ನಾರಾಯಣಗೌಡ

Published

on

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣಾ ಕಣ ಚುನಾವಣೆ ವೇಳೆ ಭಾರೀ ಸುದ್ದಿಯಲ್ಲಿತ್ತು. ಹೀಗಾಗಿ ಚುನಾವಣೆ ವೇಳೆ ಕ್ಷೇತ್ರಕ್ಕೆ ಬಂದಿದ್ದ ಸಿನಿಮಾದವರು ಈಗ ಎಲ್ಲಿ ಹೋದರು ಎಂದು ಶಾಸಕ ನಾರಾಯಣಗೌಡ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ನಡೆಯುತ್ತಿರೊ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ನಾರಾಯಣಗೌಡ ಈ ಮಾತನ್ನ ಹೇಳಿದ್ದಾರೆ. ಈಗಾಗಲೇ ನಿಖಿಲ್ ಗೆದ್ದಾಗಿದೆ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಚುನಾವಣೆ ವೇಳೆ ಕ್ಷೇತ್ರಕ್ಕೆ ಸಿನಿಮಾದವರು ಬಂದಿದ್ದರು ಈಗ ಅವರೆಲ್ಲಾ ಎಲ್ಲಿ ಹೋದರು? ಜನರ ಕಷ್ಟಗಳಿಗೆ ಆಗೋದೆ ಜೆಡಿಎಸ್‍ನವರು ಎಂದು ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಬಂದಿದ್ದ ಯಶ್ ಹಾಗೂ ದರ್ಶನ್ ರನ್ನು ಪರೋಕ್ಷವಾಗಿ ಟೀಕಿಸಿದರು.

ಕುಮಾರಣ್ಣ ಸಿಎಂ ಆಗಿರುವುದರಿಂದ ನಮಗೆ ಯಾವುದೇ ಭಯ ಇಲ್ಲ. ಪಟ್ಟಣದ ಅಭಿವೃದ್ದಿಗಾಗಿ ನಾನು 10 ಕೋಟಿ ರೂ. ಕೇಳಿದ್ದೆ. ಆದರೆ ಅವರು 23 ವಾರ್ಡ್ ಗಳಿಗೂ ಸೇರಿ 23 ಕೋಟಿ ರೂ. ನೀಡಿದ್ದಾರೆ. ಹಾಗಾಗಿ ಈ ಬಾರಿ ಪಟ್ಟಣದ ಅಭಿವೃದ್ದಿಗಾಗಿ ನಮಗೆ 23 ಸ್ಥಾನಗಳೂ ಬೇಕು ಎಂದು ತಿಳಿಸಿದರು.

ಬಳಿಕ ಮಾತನಾಡಿ, ಜಿಲ್ಲೆಯ ಅಭಿವೃದ್ದಿಗಾಗಿ ದೇವೇಗೌಡರ ಕುಟುಂಬದ ಕುಡಿ ಬೇಕಿತ್ತು. ಹಾಗಾಗಿ ನಿಖಿಲ್ ಅವರನ್ನ ಕರೆತರಲಾಗಿದೆ. ನಾವು ಶಾಸಕರೇ ನಿಖಿಲ್‍ರನ್ನ ರಾಜಕಾರಣಕ್ಕೆ ಕರೆತಂದದ್ದು. ದೇವೇಗೌಡರ ಪಾದಗಳಿಗೆ ಮುಗಿದು ನಿಖಿಲ್‍ರನ್ನ ರಾಜಕಾರಣಕ್ಕೆ ಕರೆತಂದಿದ್ದೇವೆ. ಆ ಮೂಲಕ ಅದೃಷ್ಠ ಬಂದಿದೆ ಎಂದು ಶಾಸಕ ನಾರಾಯಣಗೌಡ ಹೇಳಿದರು.