Sunday, 21st July 2019

ವಾಟ್ಸಪ್ ಹ್ಯಾಕ್ ಆಗಿದೆ, ಕೂಡಲೇ ಅಪ್‍ಡೇಟ್ ಮಾಡಿ

– ಬಳಕೆದಾರರಿಗೆ ವಾಟ್ಸಪ್ ಕಂಪನಿ ಸೂಚನೆ
– ಇಸ್ರೇಲ್ ಮೂಲದ ಕಂಪನಿಯಿಂದ ಹ್ಯಾಕ್

ವಾಷಿಂಗ್ಟನ್: ವಿಶ್ವದ ನಂಬರ್ ಒನ್ ಒನ್ ಮೆಸೇಜಿಂಗ್ ಅಪ್ಲಿಕೇಶನ್ ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಹ್ಯಾಕ್ ಆಗಿದೆ.

ಹ್ಯಾಕ್ ಆಗಿರುವ ವಿಚಾರವನ್ನು ವಾಟ್ಸಪ್ ಕಂಪನಿ ಅಧಿಕೃತವಾಗಿ ಒಪ್ಪಿಕೊಂಡಿದ್ದು, ಕೂಡಲೇ ಎಲ್ಲ ಬಳಕೆದಾರರು ಅಪ್ಲಿಕೇಶನ್ ಅನ್ನು ಅಪ್‍ಡೇಟ್ ಮಾಡಿಕೊಳ್ಳಿ ಎಂದು ಸೂಚಿಸಿದೆ.

ಇಸ್ರೇಲ್ ಮೂಲದ ಎನ್‍ಎಸ್ಒ ಗ್ರೂಪ್ ಹೆಸರಿನ ಭದ್ರತಾ ಸಂಸ್ಥೆ ಈ ಹ್ಯಾಕ್ ಮಾಡಿದೆ. ಒಂದು ತಿಂಗಳ ಹಿಂದೆಯೇ ಈ ವಿಚಾರ ಬೆಳಕಿಗೆ ಬಂದಿದ್ದು ಶುಕ್ರವಾರ ವಾಟ್ಸಪ್ ಬಗ್ ಫಿಕ್ಸ್ ಮಾಡಿದ್ದು ಶನಿವಾರ ತನ್ನ ಅಪ್ಲಿಕೇಶನ್ ಅಪ್‍ಡೇಟ್ ಮಾಡಿದೆ.

ದಾಳಿ ಹೇಗೆ ಆಗುತ್ತೆ?
ಟಾರ್ಗೆಟ್ ಮಾಡಿದ ವ್ಯಕ್ತಿಗೆ ವಾಟ್ಸಪ್ ಕರೆ ಬರುತ್ತದೆ. ಈ ಕರೆಯನ್ನು ಸ್ವೀಕರಿಸಿದರೂ ಅಥವಾ ಸ್ವೀಕರಿಸದೇ ಇದ್ದರೂ ಒಂದು ಕಣ್ಗಾವಾಲು ತಂತ್ರಾಂಶ (Surveillance Software) ಇನ್‍ಸ್ಟಾಲ್ ಆಗುತ್ತದೆ. ಕೇವಲ ರಿಂಗ್ ಆದರೂ ಈ ಸಾಫ್ಟ್ ವೇರ್ ಇನ್ ಸ್ಟಾಲ್ ಆಗುವಂತೆ ರೂಪಿಸಲಾಗಿದೆ.

ವಾಟ್ಸಪ್ ಭದ್ರತಾ ತಂಡ ಈ ದಾಳಿಯನ್ನು ಒಂದು ತಿಂಗಳ ಹಿಂದೆ ಪತ್ತೆ ಹಚ್ಚಿತ್ತು. ಪತ್ರಕರ್ತರು, ವಕೀಲರು, ಮಾನವ ಹಕ್ಕು ಹೋರಾಟಗಾರರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

ದಾಳಿಯ ಹಿಂದೆ ಯಾರಿದ್ದಾರೆ?
ಸೈಬರ್ ದಾಳಿಯ ವಿಚಾರದಲ್ಲಿ ಪ್ರಸಿದ್ಧವಾಗಿರುವ ಇಸ್ರೇಲಿನ ಎನ್‍ಎಸ್‍ಒ ಗ್ರೂಪ್ ಈ ವಾಟ್ಸಪ್ ದಾಳಿಯ ಹಿಂದೆ ಇದೆ. ಈ ಕಂಪನಿಯ ಭಾಗಶ: ಪಾಲನ್ನು ಫೆಬ್ರವರಿಯಲ್ಲಿ ಲಂಡನ್ ಮೂಲದ ನೋವಲ್‍ಪಿನಾ ಕ್ಯಾಪಿಟಲ್ ಪಡೆದುಕೊಂಡಿದೆ.

ಎನ್‍ಎಸ್‍ಒ ಕಂಪನಿ ಸ್ಪೈ ಸಾಫ್ಟ್ ವೇರ್ ಪೆಗಾಸಸ್ ಅಭಿವೃದ್ಧಿ ಪಡಿಸಿದೆ. ಫೋನ್ ಮೂಲಕ ಕ್ಯಾಮೆರಾ, ಮೈಕ್ರೋಫೋನ್, ಲೋಕೇಶನ್ ಡೇಟಾಗಳನ್ನು ಈ ಸಾಫ್ಟ್ ವೇರ್ ಸಂಗ್ರಹಿಸಿ ವ್ಯಕ್ತಿಯ ಮೇಲೆ ಗೂಢಾಚಾರಿಕೆ ಮಾಡುತ್ತದೆ.

ಅಪರಾಧ ಮತ್ತು ಉಗ್ರಗಾಮಿ ಚಟುವಟಿಕೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ಇದಕ್ಕೆ ಇಸ್ರೇಲ್ ಸರ್ಕಾರದಿಂದಲೇ ಅನುಮತಿ ಪಡೆದಿದ್ದೇವೆ ಎಂದು ಎನ್‍ಎಸ್‍ಒ ಕಂಪನಿ ಸ್ಪಷ್ಟನೆ ನೀಡಿದೆ.

ಇಲ್ಲಿಯವರೆಗೆ ಎಷ್ಟು ಬಳಕೆದಾರರಿಗೆ ತೊಂದರೆಯಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿಲ್ಲ. ಈ ಹಿಂದೆ ಎನ್‍ಎಸ್‍ಒ ಗ್ರೂಪ್ ನಮ್ಮನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಸರ್ಕಾರೇತರ ಸಂಸ್ಥೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಆರೋಪಿಸಿತ್ತು.

ಈ ಸಂಬಂಧ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಸ್ರೇಲ್ ಕೋರ್ಟ್ ನಲ್ಲಿ ದೂರು ದಾಖಲಿಸಿದೆ. ಎನ್‍ಎಸ್‍ಒ ಗ್ರೂಪಿಗೆ ನೀಡಿದ ಲೈಸೆನ್ಸ್ ರದ್ದು ಮಾಡುವಂತೆ ಇಸ್ರೇಲಿನ ರಕ್ಷಣಾ ಸಚಿವಾಲಯ ಆದೇಶ ನೀಡಬೇಕೆಂದು ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಟೆಲ್ ಅವಿವ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದು ಈ ಅರ್ಜಿಯ ವಿಚಾರಣೆ ಈ ಗುರುವಾರ ನಡೆಯಲಿದೆ.

Leave a Reply

Your email address will not be published. Required fields are marked *