Bengaluru City
ರೈತರ ಟ್ರ್ಯಾಕ್ಟರ್ ರ್ಯಾಲಿ ತಡೆಗೆ ಬೆಂಗಳೂರು ಖಾಕಿ ಪ್ಲಾನ್

ಬೆಂಗಳೂರು: ನಾಳೆ ಬೆಂಗಳೂರಿನಲ್ಲಿ ರ್ಯಾಲಿ ಮಾಡಿಯೇ ಮಾಡುತ್ತೇವೆ ಅನ್ನೋ ಉತ್ಸಾಹದಲ್ಲಿ ರೈತರಿದ್ದರೆ, ಇತ್ತ ಟ್ರ್ಯಾಕ್ಟರ್ ರ್ಯಾಲಿಯನ್ನ ತಡೆಯದೇ ಬಿಡಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಟ್ರ್ಯಾಕ್ಟರ್ ನಗರ ಪ್ರವೇಶ ಮಾಡದಂತೆ ತಡೆಯಲು ವ್ಯವಸ್ಥೆ ಮಾಡಲಾಗಿದೆ. ಹಾಗಾದ್ರೆ ನಾಳೆಯ ರೈತರ ಟ್ರ್ಯಾಕ್ಟರ್ ರ್ಯಾಲಿಗೆ ತಡೆಯೊಡ್ಡಲು ಖಾಕಿ ಪ್ಲಾನ್ ಏನು ಎಂಬುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಟ್ರ್ಯಾಕ್ಟರ್ ಪರೇಡ್ಗೆ ಖಾಕಿ ಬ್ರೇಕ್..?
ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ರ್ಯಾಲಿಗೆ ಬ್ರೇಕ್ ಹಾಕಲು ಖಾಕಿ ಪ್ಲಾನ್ ಮಾಡಿಕೊಂಡಿದೆ. ಟ್ರ್ಯಾಕ್ಟರ್ ಬೆಂಗಳೂರು ಹೊರವಲಯದಿಂದ ನಗರ ಪ್ರವೇಶ ಮಾಡದಂತೆ ತಡೆಯಲು ವ್ಯವಸ್ಥೆ ಮಾಡಲಾಗಿದೆ. ಟ್ಯಾಕ್ಟರ್ ಬಿಟ್ಟು ಕೇವಲ ರೈತರು ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು. ಟ್ರ್ಯಾಕ್ಟರ್ ರ್ಯಾಲಿಗೆ ಅವಕಾಶ ಕಲ್ಪಿಸದಿರಲು ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಎಸ್ಪಿಗೆ ಸೂಚನೆ ನೀಡಲಾಗಿದೆ. ರಾಮನಗರ ಎಸ್ಪಿಗೂ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದು, ಜಿಲ್ಲೆಗಳಿಂದ ಟ್ರ್ಯಾಕ್ಟರ್ ಹೊರಡದಂತೆ ತಡೆಯಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ಎಸ್ಪಿಗಳಿಂದ ರೈತ ಮುಖಂಡರ ಜೊತೆ ಸಭೆ ನಡೆಸಲಾಗಿದೆ.
ಮಾಗಡಿ, ರಾಮನಗರ, ಕನಕಪುರ, ಆನೇಕಲ್, ನೆಲಮಂಗಲ, ತುಮಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಕೋಲಾರದಲ್ಲೇ ತಡೆಯಲು ಸೂಚಿಸಲಾಗಿದೆ. ಟ್ರ್ಯಾಕ್ಟರ್ ಬಿಟ್ಟು ಕೇವಲ ಬೈಕ್ ರ್ಯಾಲಿ ಬಂದರೆ ಪರವಾಗಿಲ್ಲ. ಆದರೆ ನಗರದಲ್ಲಿ ಯಾವುದೇ ಟ್ರ್ಯಾಕ್ಟರ್ ಸಂಚರಿಸದಂತೆ ಕ್ರಮಕ್ಕೆ ಹಿರಿಯ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
