Connect with us

Latest

ಅಧಿಕಾರ ಸ್ವೀಕರಿಸ್ತಿದ್ದಂತೆ DGP-ADGಗಳನ್ನ ಬದಲಿಸಿದ ಮಮತಾ ಬ್ಯಾನರ್ಜಿ

Published

on

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಡಿಜಿಪಿ- ಎಡಿಜಿಗಳನ್ನ ಮಮತಾ ಬ್ಯಾನರ್ಜಿ ಬದಲಿಸಿದ್ದಾರೆ. ರಾಜ್ಯದಲ್ಲಾಗುತ್ತಿರುವ ಹಿಂಸಾಚಾರವನ್ನ ತಡೆಯುವಂತೆ ಎಲ್ಲ ಎಸ್‍ಪಿಗಳಿಗೆ ಆದೇಶಿಸಿದ್ದಾರೆ.

ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ಡಿಜಿಪಿಯಾಗಿ ನೀರಜ್ ನಯನ್ ಪಾಂಡೆ ಮತ್ತು ಎಡಿಜಿಯಾಗಿ ಜಗಮೋಹನ್ ಅವರನ್ನು ನೇಮಿಸಿತ್ತು. ಸದ್ಯ ಡಿಜಿಪಿಯಾಗಿ ವೀರೇಂದ್ರ ಮತ್ತು ಜಾವೇದ್ ಶಮೀಮ್ ಹೊಸ ಎಡಿಜಿಯಾಗಿ ನೇಮಕವಾಗಿದ್ದಾರೆ. ನೀರಜ್ ನಯನ್ ಆಗ್ನಿಶಾಮಕ ವಿಭಾಗಕ್ಕೂ ಮತ್ತು ಜಯಮೋಹನ್ ಡಿಫೆನ್ಸ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಕೊರೊನಾ ನಿಯಂತ್ರಣಕ್ಕಾಗಿ ಹೊಸ ಮಾರ್ಗಸೂಚಿ ಸಹ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಾಳೆಯಿಂದ ನಗರದಲ್ಲಿ ಲೋಕಲ್ ರೈಲುಗಳ ಸಂಚಾರ ನಿಲ್ಲಲಿದೆ. ಬೆಳಗ್ಗೆ 7 ರಿಂದ 10 ಮತ್ತು ಸಂಜೆ 5 ರಿಂದ 7 ಗಂಟೆವವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಶಾಪಿಂಗ್ ಮಾಲ್, ಚಿತ್ರಮಂದಿರ, ಬ್ಯೂಟಿ ಪಾರ್ಲರ್ ಸಂಪೂರ್ಣ ಬಂದ್ ಆಗಲಿವೆ. ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ನೌಕರರು ಹಾಜರಾಗಬೇಕೆಂದು ಸೂಚಿಸಲಾಗಿದೆ.

ಇಂದು ಮೂರನೇ ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ಸರಳವಾಗಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸತತವಾಗಿ ಮೂರನೇ ಬಾರಿ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚನೆ ಮಾಡಿದೆ. ರಾಜ್ಯಪಾಲರಾದ ಜಗದೀಪ್ ಧನ್‍ಖಡ್ ಪ್ರಮಾಣ ವಚನ ಬೋಧಿಸಿದರು. ಸಮಾರಂಭದಲ್ಲಿ ಮಮತಾ ಬ್ಯಾನರ್ಜಿ ಅವರನ್ನ ಹೊರತುಪಡಿಸಿ ಯಾರು ಪ್ರಮಾಣ ವಚನ ಪಡೆಯಲಿಲ್ಲ.

ಈ ಸಮಾರಂಭದಲ್ಲಿ ಟಿಎಂಸಿಯ ಚುನಾವಣೆಯ ರಣತಂತ್ರಗಾರ ಪ್ರಶಾಂತ್ ಕಿಶೋರ್, ಸಂಬಂಧಿ ಅಭಿಷೇಕ್ ಬ್ಯಾನರ್ಜಿ, ಪ್ರದೀಪ್ ಭಟ್ಟಾಚಾರ್ಯ ಸೇರಿದಂತೆ ಬೆರಳಿಕೆಯಷ್ಟು ಟಿಎಂಸಿ ನಾಯಕರು ಉಪಸ್ಥಿತರಿದ್ದರು. 292 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಟಿಎಂಸಿ 213ರಲ್ಲಿ ಗೆದ್ದಿದೆ. ಬಿಜೆಪಿ 77ರಲ್ಲಿ ಕಮಲ ಬಾವುಟ ಹಾರಿಸಿದೆ. ಚುನಾವಣೆ ಫಲಿತಾಂಶದ ಬಳಿಕ ಪಶ್ವಿಮ ಬಂಗಾಳದಲ್ಲಿ ಹಿಂಸಾಚಾರ ಮರುಕಳಿಸಿದೆ. ಈ ಹಿಂಸಾಚಾರದಲ್ಲಿ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *