Connect with us

ವೃದ್ಧಾಶ್ರಮಕ್ಕೆ 1 ಲಕ್ಷ ನೀಡಿ ವಿಶಿಷ್ಟವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

ವೃದ್ಧಾಶ್ರಮಕ್ಕೆ 1 ಲಕ್ಷ ನೀಡಿ ವಿಶಿಷ್ಟವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

ಮಂಗಳೂರು: ಹಲವರು ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಮಾಡಿಕೊಳ್ಳಬೇಕು ಎನ್ನುತ್ತಾರೆ. ಆದರೆ ಈ ದಂಪತಿ ವೃದ್ಧಾಶ್ರಮಕ್ಕೆ 1 ಲಕ್ಷ ರೂ. ದೇಣಿಗೆ ನೀಡುವ ಮೂಲಕ ವಿಶಿಷ್ಟವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ನಗರದ ಶ್ರೀ ಸುಬ್ರಹ್ಮಣ್ಯ ಸಭಾದ ಮಹಿಳಾ ವೇದಿಕೆಯ ಕಾರ್ಯದರ್ಶಿಯಾಗಿರುವ ಪುಷ್ಪಾವತಿ ಮತ್ತು ಶ್ರೀನಿವಾಸ್ ಅವರು ವೃದ್ಧಾಶ್ರಮಕ್ಕೆ ದೇಣಿಗೆ ನೀಡುವ ಮೂಲಕ ತಮ್ಮ 42ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ದಂಪತಿ ತಮ್ಮ ಮದುವೆಯ ದಿನದ ಸವಿನೆನಪಿಗಾಗಿ ತಮ್ಮ ವೈಯಕ್ತಿಕವಾಗಿ ಶ್ರೀ ಸಭಾದ ಪುತ್ತೂರಿನ ಶಿವಸದನ ವೃದ್ಧಾಶ್ರಮಕ್ಕೆ ಒಂದು ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ.

ಇವರ ಕೊಡುಗೆಯನ್ನು ಸುಬ್ರಹ್ಮಣ್ಯ ಸಭಾದ ಕಾರ್ಯದರ್ಶಿ ಕರುಣಾಕರ ಬೆಳ್ಳೆ, ಸಂತೋಷ ಕುಮಾರ್ ಮತ್ತು ಮಹಿಳಾ ವೇದಿಕೆಯ ಅಧ್ಯಕ್ಷೆ ಕುಸುಮಾ ನವೀನ ಕುಮಾರ್, ಉಪಾಧ್ಯಕ್ಷೆ ಸ್ನೇಹ ಲತಾ ದಿವಾಕರ್ ಸ್ವೀಕರಿಸಿದರು.

ಇದೇ ವೇಳೆ ದಂಪತಿ ವಿವಾಹ ವಾರ್ಷಿಕೋತ್ಸವ ದಿನವನ್ನು ಹಾರ ಬದಲಾಯಿಸಿ, ರಾಗಿ ಹಾಲುಬಾಯಿ ಕಟ್ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಮಾತ್ರವಲ್ಲದೆ ಈ ದಂಪತಿ ಮಹಿಳಾ ವೇದಿಕೆ ಸದನ, ಸುರತ್ಕಲ್ ಸ್ಥಾನಿಕ ಸಂಘ ಹಾಗೂ ಚಿತ್ರಾಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ಹಲವಾರು ವರ್ಷಗಳಿಂದ ಉಚಿತ ನೋಟ್ ಬುಕ್, ಪುಸ್ತಕ ವಿತರಣೆ ಸೇರಿದಂತೆ ಶಾಲೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳಿಗೆ ಹತ್ತು ಹಲವು ರೀತಿಯಲ್ಲಿ ತನುಮನ, ಧನ ಸಹಾಯ ನೀಡಿದ್ದಾರೆ.

ನಿಮ್ಮ ಸೇವಾ ಮನೋಭಾವಕ್ಕೆ ಶ್ರೀ ಸುಬ್ರಹ್ಮಣ್ಯ ಸಭಾ ಮತ್ತು ಮಹಿಳಾ ವೇದಿಕೆಯಿಂದ ಮಹಿಳಾ ವೇದಿಕೆಯ ಅಧ್ಯಕ್ಷೆ ಕುಸುಮಾ ನವೀನ್ ಕುಮಾರ್ ಅಭಿನಂದನೆ ತಿಳಿಸಿದರು. ಅಲ್ಲದೆ ದಾಂಪತ್ಯ ಜೀವನ ಸುವರ್ಣ ಮಹೋತ್ಸವದತ್ತ ಸಾಗಲಿ ಎಂದು ಹಾರೈಸಿದರು.

Advertisement
Advertisement