Sunday, 15th December 2019

ರಾಷ್ಟ್ರಪತಿ ಆಡಳಿತಕ್ಕೆ ವಿರೋಧ – ಮೈತ್ರಿ ಬಗ್ಗೆ ತುಟಿ ಬಿಚ್ಚದ ಎನ್‍ಸಿಪಿ, ಕಾಂಗ್ರೆಸ್

– ಮ್ಯಾರಥಾನ್ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ
– ಮಾತುಕತೆ ಬಳಿಕ ಅಂತಿಮ ನಿರ್ಧಾರ

ಮುಂಬೈ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿಗಳ ಆಡಳಿತ ಜಾರಿಗೆ ಬಂದಿದ್ದಕ್ಕೆ ಕಾಂಗ್ರೆಸ್ ಹಾಗೂ ಎನ್‍ಸಿಪಿ ಭಾರೀ ವಿರೋಧ ವ್ಯಕ್ತಪಡಿಸಿದ್ದು,  ಮ್ಯಾರಥಾನ್ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ಹೊರ ಹಾಕಿವೆ.

ಸುದ್ದಿಗೋಷ್ಠಿಯಲ್ಲಿ ಎನ್‍ಸಿಪಿ ನಾಯಕ ಪ್ರಫುಲ್ ಪಟೇಲ್ ಮಾತನಾಡಿ, ನವೆಂಬರ್ 11ರಂದು ಶಿವಸೇನೆ ಮೊದಲ ಬಾರಿಗೆ ಎನ್‍ಸಿಪಿಯನ್ನು ಸಂಪರ್ಕಿಸಿತ್ತು. ಎನ್‍ಸಿಪಿ ಮತ್ತು ಕಾಂಗ್ರೆಸ್ ಹಿರಿಯ ನಾಯಕರ ನಡುವೆ ಇಂದು ಸಭೆ ನಡೆದಿದೆ. ಎನ್‍ಸಿಪಿ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಶಿವಸೇನೆಗೆ ಸಂಕಷ್ಟ: 50-50 ಸರ್ಕಾರಕ್ಕೆ ಎನ್‍ಸಿಪಿ ಪಟ್ಟು, ಕಾಂಗ್ರೆಸ್‍ನಿಂದ ಭಾರೀ ಬೇಡಿಕೆ

ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಮಾತನಾಡಿ, ಜೊತೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಂದಿಗೂ ಮಾರ್ಗಸೂಚಿಗಳ ಬಗ್ಗೆ ಕಾಳಜಿ ವಹಿಸಿಲ್ಲ. ಸರ್ಕಾರ ರಚನೆಗೆ ರಾಜ್ಯಪಾಲರು ಕಾಂಗ್ರೆಸ್ಸನ್ನು ಎಂದಿಗೂ ಕರೆಯಲಿಲ್ಲ ಎಂದು ದೂರಿ, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದನ್ನು ಖಂಡಿಸಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ – 3 ಕಾರಣಗಳಿಂದಾಗಿ ರಾಜ್ಯಪಾಲರಿಂದ ಶಿಫಾರಸು

ಶಿವಸೇನೆಗೆ ಕಾಂಗ್ರೆಸ್ ಯಾಕೆ ಬೆಂಬಲ ನೀಡಲಿಲ್ಲ ಎನ್ನುವುದಕ್ಕೆ ಸ್ಪಷ್ಟನೆ ನೀಡಿದ ಪಟೇಲ್, ಕೆಲವು ವಿಷಯಗಳನ್ನು ಸ್ಪಷ್ಟಪಡಿಸುವ ಅವಶ್ಯಕತೆಯಿದೆ. ಆದ್ದರಿಂದ ಅದಕ್ಕೂ ಮೊದಲು ನಾವು ಬೆಂಬಲ ಪತ್ರವನ್ನು ನೀಡುವುದಿಲ್ಲ. ಮೈತ್ರಿಯ ಬಗ್ಗೆ ಚರ್ಚಿಸಲು ಮಾತ್ರ ಬಂದಿದ್ದೇವೆ ಎಂದು ಹೇಳಿದರು.

ಯಾವುದೇ ಮೈತ್ರಿಯನ್ನು ತರಾತುರಿಯಲ್ಲಿ ರಚಿಸಲಾಗುವುದಿಲ್ಲ. ಸಂಭಾವ್ಯ ಮೈತ್ರಿಯ ವಿಧಾನಗಳನ್ನು ನಾವು ಇನ್ನೂ ಚರ್ಚಿಸುತ್ತಿದ್ದೇವೆ. ಎನ್‍ಸಿಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಇದಾದ ಬಳಿಕ ಶಿವಸೇನೆಯ ಜೊತೆಗೆ ಚರ್ಚೆ ನಡೆಸುತ್ತೇವೆ ಎಂದು ಕಾಂಗ್ರೆಸ್ ಅಹ್ಮದ್ ಪಟೇಲ್ ತಿಳಿಸಿದರು.

ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾತನಾಡಿ, ನಾವು ಯಾವುದೇ ಆತುರದಲ್ಲಿ ಇಲ್ಲ. ಕಾಂಗ್ರೆಸ್ ಜೊತೆಗೆ ಚರ್ಚೆ ನಡೆಸಿದ ನಂತರ ಶಿವಸೇನೆಗೆ ಬೆಂಬಲ ನೀಡುವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದರು.

Leave a Reply

Your email address will not be published. Required fields are marked *