Sunday, 17th November 2019

ಶಾಲೆಗೆ ಬಕೆಟ್ ತೆಗೆದುಕೊಂಡು ಹೋಗ್ಲೇಬೇಕು- ಗದಗ ವಸತಿ ಶಾಲೆಯ ದುಸ್ಥಿತಿ

ಗದಗ: ಜಿಲ್ಲೆಯಲ್ಲೊಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಇದೆ. ಶಾಲೆಗೆ ಹೋಗಬೇಕಾದರೆ ಬುಕ್ಸ್, ನೋಟ್ ಬುಕ್, ಪೆನ್ನು, ಪೆನ್ಸಿಲ್ ಒಯ್ಯೋದು ಸಹಜ. ಆದರೆ ಈ ಶಾಲೆಗೆ ವಿದ್ಯಾರ್ಥಿಗಳು ಹೋಗಬೇಕಾದರೆ ಬಕೆಟ್ ತೆಗೆದುಕೊಂಡು ಹೋಗಲೇಬೇಕು.

ಹೌದು. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದುಸ್ಥಿತಿ. ಇಲ್ಲಿನ ಮಕ್ಕಳಿಗೆ ಪಾಠಕ್ಕಿಂತಲೂ ನೀರಿನದ್ದೇ ಜಾಸ್ತಿ ಚಿಂತೆಯಾಗಿದೆ. ನಿತ್ಯವೂ ಪಾಠ ಬಿಟ್ಟು ನೀರಿಗಾಗಿ ಕಾಯುವ ದುಸ್ಥಿತಿ ಇದೆ. ನೀರಿಗಾಗಿ ಮಕ್ಕಳು ಪರದಾಡುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಕುಂಭಕರ್ಣ ನಿದ್ದೆಗೆ ಜಾರಿದ್ದಾರೆ. ಇದು ಮಕ್ಕಳ ಕೋಪಕ್ಕೆ ಕಾರಣವಾಗಿದೆ.

ಒಂದ್ಕಡೆ ಸಿಎಂ ತಾವು ಹೋಗೋ ಗ್ರಾಮಗಳ ಶಾಲೆಗೆ ಸೌಲಭ್ಯ ಕೊಡಿಸಿಕೊಂಡು ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ. ಆದರೆ ಈ ಶಾಲೆಯಲ್ಲಿ ಇರೋ ಮೂರು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಶಾಲೆ ಶುರುವಾಗಿ ತಿಂಗಳು ಆದರೂ ನೀರಿನ ಸಮಸ್ಯೆ ಬಗೆಹರಿಸೋಕೆ ಯಾವೊಬ್ಬ ಅಧಿಕಾರಿಯೂ ಮುಂದಾಗಿಲ್ಲ. ಶಾಲೆಗೆ ದಿನ ನಿತ್ಯವೂ ಟ್ಯಾಂಕರ್‍ನಲ್ಲಿ ನೀರು ತರಿಸಲಾಗುತ್ತದೆ. ನೀರು ಬಂದ ಕೂಡಲೇ ಬಕೆಟ್‍ನಲ್ಲಿ ನೀರು ತಂದಿಟ್ಟುಕೊಂಡು ಆ ಬಳಿಕ ಕ್ಲಾಸ್‍ಗೆ ಹೋಗಬೇಕು ಎಂದು ವಿದ್ಯಾರ್ಥಿ ಮಂಜುನಾಥ್ ತಿಳಿಸಿದ್ದಾನೆ.

ಈ ವಸತಿ ಶಾಲೆಯಲ್ಲಿ ಒಟ್ಟು 239 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ 10ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸ್ತಿದ್ದಾರೆ. ಆದರೆ ಇವರಿಗೆ ಅಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ ಎಮದು ವಿದ್ಯಾರ್ಥಿನಿ ಐಶ್ವರ್ಯಾ ಹೇಳಿದ್ದಾಳೆ.

ಒಟ್ಟಿನಲ್ಲಿ ಸರ್ಕಾರ ಬಡಮಕ್ಕಳ ಶಿಕ್ಷಣಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಿ ವಸತಿ ಶಾಲೆ ಕಟ್ಟಿಸುತ್ತದೆ. ಕೋಟಿ ಕೋಟಿ ಅನುದಾನವನ್ನೂ ಬಿಡುಗಡೆ ಮಾಡುತ್ತದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯವೋ, ಧನದಾಹವೋ ಗೊತ್ತಿಲ್ಲ. ಆ ಅನುದಾನವಂತೂ ಸರಿಯಾಗಿ ಬಳಕೆಯಾಗದಿರುವುದರಿಂದ ಮಕ್ಕಳಿಗೆ ಸರಿಯಾದ ಸೌಲಭ್ಯ ಸಿಗ್ತಿಲ್ಲ. ಇನ್ನಾದ್ರೂ ಈ ಸಮಸ್ಯೆ ಬಗೆಹರಿಯುತ್ತಾ ಎಂಬುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *