Saturday, 14th December 2019

ಮಗಳು ಜೀವಾ ಜೊತೆ ಡ್ಯಾನ್ಸ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ

ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ತಮ್ಮ 38ನೇ ಹುಟ್ಟುಹಬ್ಬವನ್ನು ಮಗಳ ಜೊತೆ ಕೇಕ್ ಕತ್ತರಿಸಿ ಆಚರಿಸಿದ್ದಾರೆ.

ಈ ಸಂಭ್ರಮಾಚರಣೆಯಲ್ಲಿ ಧೋನಿ ಅವರು ತನ್ನ ಮಗಳ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಪಾರ್ಟಿಯಲ್ಲಿ ಭಾರತದ ಕ್ರಿಕೆಟ್ ತಂಡದ ಆಟಗಾರರಾದ ಕೇದಾರ್ ಜಾಧವ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಕೂಡ ಕಾಣಿಸಿಕೊಂಡಿದ್ದಾರೆ.

ಈ ಹುಟ್ಟು ಹಬ್ಬದ ಆಚರಣೆಯ ಫೋಟೋವನ್ನು ಧೋನಿ ಅವರ ಪತ್ನಿ ಸಾಕ್ಷಿ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದು, ಧೋನಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ವಿಶ್ ಮಾಡಿದ್ದಾರೆ. ಧೋನಿ ಅವರಿಗೆ ಟ್ವೀಟ್ ಮಾಡಿ ವಿಶ್ ಮಾಡಿರುವ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ವಿಶ್ವದಲ್ಲಿ ಏಳು ಖಂಡಗಳು, ವಾರದಲ್ಲಿ ಏಳು ದಿನಗಳು, ಕಾಮನಬಿಲ್ಲಿನಲ್ಲಿ ಏಳು ಬಣ್ಣಗಳು, ವಿಶ್ವದಲ್ಲಿ ಏಳು ಅದ್ಭುತಗಳು ಹಾಗೆಯೇ ಏಳನೇ ತಿಂಗಳ ಏಳನೇ ದಿನ ಕ್ರಿಕೆಟಿಂಗ್ ಪ್ರಪಂಚದ ಅದ್ಭುತ ಜನ್ಮ ದಿನ ಎಂದು ವಿಶ್ ಮಾಡಿದ್ದಾರೆ.

ಧೋನಿ ಅವರ ಹುಟ್ಟು ಹಬ್ಬಕ್ಕೆ ವಿಡಿಯೋವೊಂದನ್ನು ಟ್ವಿಟ್ಟರ್‍ ಗೆ ಹಾಕಿ ಶುಭಕೋರಿರುವ ಐಸಿಸಿ “ಭಾರತೀಯ ಕ್ರಿಕೆಟ್ ದಿಕ್ಕನ್ನೇ ಬದಲಿಸಿದ ಆಟಗಾರ. ಧೋನಿ ಎಂಬ ಹೆಸರು ಜಗತ್ತಿನ ಕೋಟ್ಯಂತರ ಮಂದಿಗೆ ಸ್ಫೂರ್ತಿ. ಅವರ ಹೆಸರು ಅಳೆಯಲಾಗದ ಅಸ್ತಿ ಎಂದು ಹೇಳಿದೆ. ಈ ವಿಡಿಯೋದಲ್ಲಿ 2007ರ ಟಿ20 ವಿಶ್ವಕಪ್ ಗೆದ್ದ ಕ್ಷಣ, 2011 ರ ವಿಶ್ವಕಪ್ ಗೆದ್ದ ಕ್ಷಣ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಐತಿಹಾಸಿಕ ಕ್ಷಣಗಳನ್ನು ಹಾಕಲಾಗಿದೆ.

ಇದರ ಜೊತೆ ಈ ವಿಡಿಯೋದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಧೋನಿ ಅವರು ಯಾವುದೇ ಪರಿಸ್ಥಿತಿಯಲ್ಲೂ ತಂಡಕ್ಕೆ ಸಹಾಯ ಮಾಡಬಲ್ಲ ಆಟಗಾರ ಮತ್ತು ನಾಯಕನಾಗಿ ಅತ್ಯಂತ ತಾಳ್ಮೆ ಇರುವ ಆಟಗಾರ ಅವರು ಎಂದಿಗೂ ನನ್ನ ನಾಯಕ ಎಂದು ಹೇಳಿರುವುದನ್ನು ಹಾಕಲಾಗಿದೆ. ಇನ್ನೂ ಈ ವಿಡಿಯೋದಲ್ಲಿ ಇಂಗ್ಲೆಂಡ್‍ನ ಆಟಗಾರ ಬೆನ್ ಸ್ಟೋಕ್ಸ್ ಅವರು ಧೋನಿ ಒಬ್ಬ ಶ್ರೇಷ್ಠ ಕ್ರಿಕೆಟಿಗ ಮತ್ತು ವಿಕೆಟ್ ಕೀಪರ್ ಅವರಂಥ ಆಟಗಾರ ಮತ್ತೊಬ್ಬ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಈ ವಿಡಿಯೋದಲ್ಲಿ ಹಲವಾರು ಕ್ರಿಕೆಟ್ ಆಟಗಾರರು ಧೋನಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಇದನ್ನು ಬಿಟ್ಟರೆ ಭಾರತದ ಮಾಜಿ ಆಟಗಾರ ವಿವಿಸ್ ಲಕ್ಷ್ಮಣ್ ಅವರು ಮತ್ತು ಟೀಂ ಇಂಡಿಯಾ ಆಟಗಾರ ವಿಜಯ್ ಶಂಕರ್ ಇನ್ನೂ ಮುಂತಾದವರು ಧೋನಿಗೆ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ.

Leave a Reply

Your email address will not be published. Required fields are marked *