Connect with us

Bengaluru City

ಎಚ್ಚರಿಕೆಯನ್ನು ನಾನು ಸ್ವೀಕರಿಸುವುದಿಲ್ಲ, ಇತರರಿಗೂ ನೀಡಲ್ಲ: ಸುದೀಪ್

Published

on

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟ್ಟರಿನಲ್ಲಿ ಎಚ್ಚರಿಕೆಯನ್ನು ನಾನು ಸ್ವೀಕರಿಸುವುದಿಲ್ಲ, ಇತರರಿಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಎಚ್ಚರಿಕೆಯನ್ನು ನಾನು ಸ್ವೀಕರಿಸುವುದಿಲ್ಲ ಹಾಗೂ ಬೇರೆಯವರಿಗೆ ನೀಡುವುದಿಲ್ಲ. ಪದಗಳು ಯುದ್ಧಗಳನ್ನು ಗೆಲ್ಲಲು ಸಾಧ್ಯವಾದರೆ, ಇಂದು ಅನೇಕ ರಾಜರು ಹಾಗೂ ಆಡಳಿತಗಾರರು ಇರುತ್ತಿದ್ದರು. ಆದರೆ ನಾನು ಮನುಷ್ಯತ್ವ ದಾರಿಯಲ್ಲಿ ಹೋಗಲು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಟಂಬ್ಲರ್ ನಲ್ಲಿ ಬರೆದುಕೊಂಡಿದ್ದಾರೆ.

ಪತ್ರದಲ್ಲಿ ಏನಿದೆ?
ಪೈಲ್ವಾನ್ ಬಿಡುಗಡೆಯಾದ ಕ್ಷಣದಿಂದ ಸುಮಾರು ವಿಷಯಗಳು ಸಂಭವಿಸುತ್ತಿವೆ. ಆದರೆ ಇದು ಒಳ್ಳೆಯ ಲಕ್ಷಣಗಳು ಎಂದು ನನಗೆ ಅನ್ನಿಸುತ್ತಿಲ್ಲ. ಹಾಗೆ ಎಲ್ಲಾ ಸಂದರ್ಭದಲ್ಲೂ, ಎಲ್ಲದ್ದಕ್ಕೂ ಉತ್ತರಿಸುತ್ತಾ ಕೂರುವುದು ಕೂಡ ಒಳ್ಳೆಯದಲ್ಲ. ಕೆಲವು ಬಾರಿ ಕುರುಡನ ಹಾಗೆ, ಕಿವುಡನ ಹಾಗೆ ಇದ್ದು ಬಿಟ್ಟರೆ ಅದೆಷ್ಟೋ ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳಬಹುದು. ನಿಮ್ಮ ಬದುಕಿನ ಕಡೆ ಗಮನಹರಿಸಿ, ಒಳ್ಳೆಯದನ್ನು ಮಾಡಿ ಇಂತಹ ವಿಷಯಗಳ ಬಗ್ಗೆ ತಲೆಕೆಡಸಿಕೊಳ್ಳಬೇಡಿ. ಏಕೆಂದರೆ ಇಲ್ಲಿ ಸತ್ಯವೇ ಅಂತಿಮ. ಎಚ್ಚರಿಕೆ, ಬೆದರಿಕೆಗಳಿಂದ ಏನೂ ಆಗುವುದಿಲ್ಲ. ಯಾರೂ ಸಣ್ಣವರಾಗುವುದಿಲ್ಲ.

ಪೈಲ್ವಾನ್ ಪೈರಸಿಗೆ ಸಂಬಂಧಿಸಿದಂತೆ ನಾವು ಯಾವ ನಟನ ಹೆಸರನ್ನು ಪ್ರಸ್ತಾಪಿಸಿಲ್ಲ. ಸೋಮವಾರ ನಮ್ಮ ನಿರ್ಮಾಪಕರು ಪೈಲ್ವಾನ್ ಪೈರಸಿಗೆ ಆ ನಟನ ಅಭಿಮಾನಿಗಳು ಕಾರಣರಲ್ಲ ಎಂದು ಹೇಳಿದ್ದಾರೆ ಮತ್ತು ಹೇಳುತ್ತಿದ್ದಾರೆ. ಹಾಗಂತ ಪೈರಸಿ ಆಗಿಲ್ಲ ಎಂದು ಅರ್ಥವಲ್ಲ. ತುಂಬಾ ದೊಡ್ಡ ಮಟ್ಟದಲ್ಲಿ ಪೈರಸಿಯಾಗಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಲಿಂಕ್ ಗಳನ್ನು ಹರಿಬಿಟ್ಟಿದ್ದಾರೆ. ಅವರೆಲ್ಲರ ಹೆಸರುಗಳನ್ನು ನಾವು ಸೈಬರ್ ಪೊಲೀಸರಿಗೆ ನೀಡಿದ್ದೇವೆ. ಆದರೆ ಇದರಿಂದ ಕನ್ನಡ ಸಿನಿಮಾವೊಂದಕ್ಕೆ ಆದ ನಷ್ಟವೆಷ್ಟು? ಉತ್ಸಾಹ ಕಳೆದುಕೊಂಡ ಸಿನಿಮಾ ಕರ್ಮಿಗಳೆಷ್ಟು? ಎಂಬುದನ್ನು ಯಾರಾದರೂ ಯೋಚಿಸಿದ್ದಾರಾ? ಇಲ್ಲ ಅವರಿಗೆ ಮತ್ತೊಬ್ಬರ ಅವಸಾನವನ್ನು ನೋಡಲು ಇರುವಷ್ಟು ಕಾತುರ ಒಳ್ಳೆಯದನ್ನು ಮಾಡುವಾಗ ಇರುವುದಿಲ್ಲ. ನನ್ನ ಹೆಸರನ್ನು ತಮಾಷೆಯಾಗಿ ಮಾಡಿಕೊಂಡಾಗ ಸಿಗುವಷ್ಟು ಸಮಾಧಾನ ಎತ್ತರದಲ್ಲಿ ನಿಂತಾಗ ಸಿಗುವುದಿಲ್ಲ. ಇಂತಹ ವಿಷಯಗಳನ್ನು ನೋಡಿದಾಗ ನಿಮ್ಮೆಲ್ಲರಿಗೂ ನೋವಾಗುತ್ತದೆ ಎಂದು ನನಗೆ ಗೊತ್ತು. ಆದರೆ ನೆನಪಿರಲಿ ನಾನು ಇಂತಹ ವಿಷಯಗಳಿಂದ ಸಣ್ಣವನಾಗುವುದಿಲ್ಲ.

ನನ್ನ ಸಿನಿಮಾ ಮತ್ತು ನಿರ್ಮಾಪಕರನ್ನು ಕಾಪಾಡಿಕೊಳ್ಳುವುದಕ್ಕೆ ನಾನು ಟ್ವೀಟ್ ಮಾಡಿರುವುದು ನಿಜ. ಆದರೆ ಅದು ಯಾವುದೇ ನಟನ ಬಗ್ಗೆ ಅಲ್ಲ. ನಮ್ಮ ಸಿನಿಮಾದ ಪೈರಸಿ ಮಾಡಿದವರ ಬಗ್ಗೆ. ಅದನ್ನು ಇವರು ತಮಗೆ ಯಾಕೆ ಅನ್ವಯಿಸಿಕೊಂಡರೋ ಎಂದು ನನಗೆ ಅರ್ಥವಾಗುತ್ತಿಲ್ಲ. ನನ್ನ ಪೈಲ್ವಾನ್ ಸಿನಿಮಾಗೆ ಅಭಿಮಾನಿ ಸ್ನೇಹಿತರಾದ ನೀವು ತೋರಿದ ಪ್ರೀತಿ. ಇಂಡಸ್ಟ್ರಿಯ ಸಹೋದ್ಯೋಗಿಗಳು ತೋರಿದ ಪ್ರೋತ್ಸಾಹವನ್ನು ಖಂಡಿತವಾಗಿಯೂ ಮರೆಯಲಾಗುವುದಿಲ್ಲ. ಇನ್ನೂ ನಾನು ಏನಾದರೂ ಪ್ರೂವ್ ಮಾಡಿಕೊಳ್ಳುವ ಅಗತ್ಯವಿದೆ ಎಂದು ನನಗೆ ಈಗ ಅನಿಸುತ್ತಿಲ್ಲ.

ಸಿನಿಮಾದ ಹೀರೋ ರೀತಿ ನಾನು ಯಾರಿಗೂ ಎಚ್ಚರಿಕೆ ಕೊಡುವುದಿಲ್ಲ. ಏಕೆಂದರೆ ಅದು ಈಗ ನನ್ನ ಸ್ವಭಾವವಲ್ಲ. ಹೌದು. ಒಂದು ಕಾಲದಲ್ಲಿ ನಾನೂ ಆ ರೀತಿ ಇದ್ದೆ. ತುಂಬಾ ವಿಷಯಗಳಲ್ಲಿ ಖಾರವಾಗಿಯೇ ಮಾತನಾಡುತ್ತಿದ್ದೆ. ಕೆಲವರ ಬಗ್ಗೆ ರೋಷದಿಂದಲೂ ಟೀಕಿಸಿದ್ದೆ. ಆದರೆ ಬದುಕಿನ ಪಯಣ ನನ್ನ ಅರಿವಿನ ಮಿತಿಯನ್ನು ವಿಸ್ತರಿಸುತ್ತಾ ಹೋದಂತೆ ನಾನೂ ಬದಲಾಗುತ್ತಾ ಹೋದೆ. ನನ್ನ ಖಾಸಗಿ ಬದುಕಿನಲ್ಲೇ ಅನೇಕ ತೊಂದರೆಗಳಿದ್ದವು. ಅವನ್ನು ಕೂಡ ಸರಿಪಡಿಸಿಕೊಂಡು ಮುನ್ನುಡಿ ಇಡುವ ಪ್ರಯತ್ನವನ್ನು ಮಾಡಿದೆ. ತಪ್ಪನ್ನು ಎಲ್ಲರೂ ಮಾಡ್ತಾರೆ. ಆದರೆ ತಿದ್ದಿಕೊಂಡು ಹೋಗುವುದು ತಾನೇ ಮನುಷ್ಯತ್ವ. ನಾನೂ ಹಾಗೇ ಒಬ್ಬ ಉತ್ತಮ ವ್ಯಕ್ತಿಯಾಗಬೇಕೆಂಬ ಹಂಬಲದಿಂದ ದ್ವೇಷ, ರೋಷಗಳ ಜಾಗದಲ್ಲಿ ಪ್ರೀತಿ, ವಿಶ್ವಾಸಗಳ ಬೆಳೆಯನ್ನು ಬಿತ್ತಿದೆ. ನಾನು ಕ್ಷಮೆ ಕೇಳಲು ಮತ್ತು ಕ್ಷಮೆಯನ್ನು ಒಪ್ಪಿಕೊಳ್ಳಲು ಯಾವತ್ತೂ ಮುಜುಗರಪಡಲಿಲ್ಲ.

ನನ್ನ ಆ ನಿರ್ಧಾರ ಫಲ ಕೊಡುವ ಸಂದರ್ಭದಲ್ಲಿ ಮತ್ತೆ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುವ ಅಗತ್ಯವಿದೆಯೇ ನೀವೇ ಹೇಳಿ. ಅಂದು ಕೆಲವರನ್ನು ಟೀಕಿಸಿದ್ದೂ ಸಾರ್ವಜನಿಕವಾಗಿಯೇ. ಇಂದು ಅವರನ್ನು ಒಪ್ಪಿ, ಅಪ್ಪಿರುವುದೂ ಸಾರ್ವಜನಿಕವಾಗಿಯೇ. ನಾನು ಇದುವರೆಗೆ ಏನು ಸಂಪಾದಿಸಿದ್ದೇನೆಯೋ ಅದೆಲ್ಲವೂ ನನ್ನ ಕೆಲಸ, ಪ್ರೀತಿ, ವಿಶ್ವಾಸಗಳಿಂದಲೇ ಎಂಬುದು ಎಲ್ಲರಿಗೂ ಗೊತ್ತು. ಪರಸ್ಪರ ಪ್ರೀತಿ, ವಿಶ್ವಾಸವನ್ನು ಹಂಚಿಕೊಳ್ಳುವುದರಲ್ಲಿ ನನಗೆ ಆನಂದವಿದೆ. ಅದನ್ನೇ ಮುಂದುವರಿಸುತ್ತೇನೆ. ತುಂಬಾ ಕಡಿಮೆ ಸಮಯ ನಾವು ಈ ಭೂಮಿಯಲ್ಲಿರುತ್ತೇವೆ. ಆ ಸಮಯವನ್ನು ಹೆಚ್ಚು ಅರ್ಥಪೂರ್ಣಗೊಳಿಸುವ ಜವಾಬ್ದಾರಿ ನನ್ನ ಮೇಲಿದೆ. ಆದ್ದರಿಂದ ಎಲ್ಲವನ್ನೂ ಮರೆತು ಹೊಸ ಉತ್ಸಾಹದಿಂದ ಮುನ್ನುಗ್ಗಿ. ಹರಿಯುವ ನದಿ ನಿಲ್ಲಬಾರದಲ್ಲವೇ ಸ್ನೇಹಿತರೇ.

ಈ ಸಂದರ್ಭದಲ್ಲಿ “ಜಗತ್ತನ್ನೇ ಗೆದ್ದು ಬರಿಗೈನಲ್ಲಿ ಹೊರಟ” ಅಲೆಗ್ಸಾಂಡರ್ ನೆನಪಾಗುತ್ತಿದ್ದಾನೆ. ಅಲೆಗ್ಸಾಂಡರ್ ಬದುಕಿನ ನೀತಿಯನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ. ಈ ಜಗತ್ತಿಗೆ ನಾವು ಕೊಟ್ಟು ಹೋಗುವುದು ನಮ್ಮ ನೆನಪುಗಳೇ ಹೊರತು ಮತ್ತೇನಲ್ಲ. ಆದರೆ ಆ ನೆನಪುಗಳು ಒಳ್ಳೆಯದಾಗಿರಬೇಕು ಎಂಬುದು ನನ್ನ ಆಸೆ” ಎಂದು ಪತ್ರದಲ್ಲಿ ಬರೆದಿದ್ದಾರೆ.