Connect with us

Latest

ಇಂದು ಬಿಹಾರ ವಿಧಾನಸಭೆ ಮೊದಲ ಹಂತದ ಚುನಾವಣೆ

Published

on

– ಕೊರೊನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ

ಪಾಟ್ನಾ: ತೀವ್ರ ಕುತೂಹಲ ಮೂಡಿಸಿರುವ ಬಿಹಾರ ವಿಧಾನಸಭೆಯ 243 ಕ್ಷೇತ್ರಗಳಿಗೆ ಇಂದಿನಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 71 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಶಾಂತಿಯುತ ಚುನಾವಣೆಗಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಇಂದು ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ 71 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. 16 ಜಿಲ್ಲೆಗಳ 71 ವಿಧಾನಸಭಾ ಕ್ಷೇತ್ರಗಳಲ್ಲಿ 114 ಮಹಿಳಾ ಅಭ್ಯರ್ಥಿಗಳು ಸೇರಿ ಒಟ್ಟು 1,066 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಕೊರೊನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ:  ಬಿಹಾರದಲ್ಲಿ ಎನ್‍ಡಿಎ ಮೈತ್ರಿಕೂಟಕ್ಕೆ ಗೆಲುವು – ಎಬಿಸಿ- ಸಿ ವೋಟರ್ ಸಮೀಕ್ಷೆ ಭವಿಷ್ಯ

ಕೊರೊನಾ ನಡುವೆ ನಡೆಯುತ್ತಿರುವ ಮೊದಲ ಚುನಾವಣೆ ಹಿನ್ನೆಲೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ. ಅಲ್ಲದೇ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಮಾಡಲಾಗಿದೆ. ನಕ್ಸಲ್ ಹಾವಳಿ ಇರುವ ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆಡಳಿತ ರೂಢ ಎನ್‍ಡಿಎ ಹಾಗೂ ಮಹಾ ಮೈತ್ರಿಕೂಟಕ್ಕೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಇದನ್ನೂ ಓದಿ: ಬಿಹಾರ ಚುನಾವಣೆ – ಆರ್‌ಜೆಡಿಯಿಂದ 10 ಲಕ್ಷ ಉದ್ಯೋಗ, ಕೃಷಿ ಸಾಲ ಮನ್ನಾ ಭರವಸೆ

ಇಂದಿನ ಮತದಾನದಲ್ಲಿ ಎನ್‍ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ಸಚಿವರಾಗಿರುವ ಕೃಷ್ಣನಂದನ್ ವರ್ಮ, ಪ್ರೇಮ್ ಕುಮಾರ್, ಜೈ ಕುಮಾರ್ ಸಿಂಗ್, ಸಂತೋಷ್ ಕುಮಾರ್ ನಿರಾಲ, ವಿಜಯ ಸಿನ್ಹಾ ಮತ್ತು ರಾಮ್‍ನಾರಾಯಣ್ ಮಂಡಲ್ ಕ್ಷೇತ್ರಗಳು ಒಳಗೊಂಡಿದ್ದು, ಸಂಜೆ ವೇಳೆಗೆ 1,066 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮೊದಲ ಹಂತ ಚುನಾವಣೆಗಾಗಿ ಸೋಮವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿತ್ತು. ಇದನ್ನೂ ಓದಿ: ಬಿಹಾರ ಜನತೆಗೆ ಉಚಿತ ಕೊರೊನಾ ವ್ಯಾಕ್ಸಿನ್ – ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಬಿಹಾರದಲ್ಲಿ ನ.3 ಮತ್ತು ನ.7ರಂದು ಎರಡು ಮತ್ತು ಮೂರನೇ ಹಂತದ ಚುನಾವಣೆಗಳು ನಡೆಯಲಿದ್ದು, ನ.10ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಎನ್‍ಡಿಎ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಈಗಾಗಲೇ ಸಮೀಕ್ಷೆಗಳು ಹೇಳಿವೆ.

ಅಹಂಕಾರ, ಅಧಿಕಾರದಿಂದಾಗಿ ಬಿಹಾರ ಅಭಿವೃದ್ಧಿಯಾಗಿಲ್ಲ ಅಂತ ನಿತೀಶ್ ಕುಮಾರ್ ವಿರುದ್ಧ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಮಹಾಘಟಬಂಧನಕ್ಕೆ ಮತ ನೀಡುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ. ಇತ್ತ ಲಾಲೂಪ್ರಸಾದ್‍ಗೆ 9 ಮಂದಿ ಮಕ್ಕಳಿದ್ದು ತೇಜಸ್ವಿ ಯಾದವ್ 8ನೇ ಮಗ ಎಂಬ ನಿತೀಶ್ ಕುಮಾರ್ ಹೇಳಿಕೆಗೆ ತೇಜಸ್ವಿ ಯಾದವ್ ತಿರುಗೇಟು ನೀಡಿದ್ದಾರೆ. ಹಿರಿಯರಾದ ನಿತೀಶ್ ಕುಮಾರ್ ಮಾನಸಿಕವಾಗಿ ಹಾಗೂ ದೈಹಿಕವಾಗಿ ದಣಿದಿದ್ದಾರೆ. ನನ್ನ ವಿರುದ್ಧ ಬಳಸುವ ಪದಗಳನ್ನು ಆಶೀರ್ವಾದ ಅಂದ್ಕೊತೀನಿ. ಪ್ರಧಾನಿ ಮೋದಿ 6 ಮಂದಿ ಸಹೋದರರನ್ನು ಹೊಂದಿದ್ದಾರೆ ಅನ್ನೋದನ್ನು ಮರೀಬಾರದು ಅಂದಿದ್ದಾರೆ. ಅಲ್ಲದೆ ಮೋದಿಗೆ 11 ಪ್ರಶ್ನೆಗಳನ್ನು ಕೂಡ ಕೇಳಿದ್ದಾರೆ.

Click to comment

Leave a Reply

Your email address will not be published. Required fields are marked *