Connect with us

Latest

ಬಿಹಾರದಲ್ಲಿ ಎರಡನೇ ಹಂತದ ಮತದಾನ – ದೇಶದ 10 ರಾಜ್ಯಗಳ 54 ವಿಧಾನಸಭಾಕ್ಷೇತ್ರಗಳಿಗೆ ವೋಟಿಂಗ್

Published

on

ನವದೆಹಲಿ : ಬಿಹಾರ ವಿಧಾನಸಭೆ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದ್ದು ಇಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ದೇಶದ 10 ರಾಜ್ಯಗಳ 54 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಆರಂಭಗೊಂಡಿದ್ದು, ಮತದಾರರು ಮತಗಟ್ಟೆಯತ್ತ ಆಗಮಿಸುತ್ತಿದ್ದಾರೆ.

ಬಿಹಾರದ 17 ಜಿಲ್ಲೆಯ 94 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಬಿಹಾರದಲ್ಲಿ ಮುಂದಿನ ಸರ್ಕಾರ ಯಾರದ್ದು ಅನ್ನೋದನ್ನ ಬಹುತೇಕ ಈ ಹಂತ ನಿರ್ಧರಿಸಲಿದ್ದು 2.86 ಕೋಟಿ ಮತದಾರರು 1463 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆಯ 6 ಗಂಟೆಯ ತನಕ ಮತದಾನಕ್ಕೆ ಅವಕಾಶ ಕಲ್ಪಿಸಿದೆ.

ಕೊರೊನಾ ಕಾರಣದಿಂದಾಗಿ ಒಂದು ಗಂಟೆ ಮತದಾನದ ಸಮಯ ಹೆಚ್ಚಿಸಿದ್ದು ಕೊನೆಯ ಒಂದು ಗಂಟೆ ಅವಧಿಯಲ್ಲಿ ಕೊರೊನಾ ಸೋಂಕಿತರು ಹಕ್ಕು ಚಲಾಯಿಸಬಹುದು. ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. 80 ವರ್ಷಕ್ಕೂ ಹೆಚ್ಚಿನವರಿಗೆ ಅಂಚೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆ ಇನ್ನಷ್ಟು ಬಿಗಿಗೊಳಿಸಲಾಗಿದೆ.

ಎರಡನೇ ಹಂತದಲ್ಲಿ ಬಿಜೆಪಿ 46 ಕ್ಷೇತ್ರಗಳಲ್ಲಿ ಅದರ ಮಿತ್ರ ಪಕ್ಷ ಜೆಡಿಯು 43 ಕ್ಷೇತ್ರಗಳಲ್ಲಿ ಅಖಾಡಕ್ಕಿಳಿದಿದೆ. ಅದರ ಮತ್ತೊಂದು ಮಿತ್ರ ಪಕ್ಷ ವಿಐಪಿ 5 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಮಹಾಘಟಬಂಧನ್ ಪೈಕಿ ಆರ್ ಜೆಡಿ 56, ಕಾಂಗ್ರೆಸ್ 24 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಸಿಪಿಐಎಂಎಲ್ 6 ಕ್ಷೇತ್ರ, ಸಿಪಿಎಂ ಮತ್ತು ಸಿಪಿಐ ತಲಾ 4 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿವೆ.

ಪ್ರತಿಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ರಘೋಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದು ಪಾರಂಪರಿಕವಾಗಿ ಆರ್ ಜೆಡಿ ಭದ್ರಕೋಟೆಯೂ ಯಾಗಿದ್ದು 1995, 2000ರ ಚುನಾವಣೆಯಲ್ಲಿ ಲಾಲೂ ಪ್ರಸಾದ್ ಯಾದವ್ ಇಲ್ಲಿ ಗೆದ್ದಿದ್ದರು. 2005ರಲ್ಲಿ ಲಾಲೂ ಯಾದವ್ ಪತ್ನಿ ರಾಬ್ಡಿ ದೇವಿಗೆ ಈ ಕ್ಷೇತ್ರ ಒಲಿದಿತ್ತು. 2010ರಲ್ಲಿ ರಾಬ್ಡಿ ದೇವಿಗೆ ಇದೇ ಕ್ಷೇತ್ರದಲ್ಲಿ ಸೋಲನ್ನಪ್ಪಿದ್ದರು. ತೇಜಸ್ವಿ ಯಾದವ್ ಅಣ್ಣ ತೇಜ್ ಪ್ರತಾಪ್ ಯಾದವ್ ಸಮಸ್ತಿಪುರದ ಹಸನ್ ಪುರ ಕ್ಷೇತ್ರದಿಂದ ಆಯ್ಕೆ ಬಯಸಿದ್ದಾರೆ. ತೇಜ್ ಪ್ರತಾಪ್ 2015ರಲ್ಲಿ ಮಹುವಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಪಾಟ್ನಾ ಸಾಹೀಬ್ ಕ್ಷೇತ್ರ ಬಿಜೆಪಿ ಪಾಲಿಗೆ ಮಹತ್ವದ್ದಾಗಿದ್ದು, ಇಲ್ಲಿಂದ ಬಿಜೆಪಿ ಮಂತ್ರಿ ನಂದ ಕಿಶೋರ್ ಯಾದವ್ ಸತತ ಏಳನೇ ಸಲ ಮರು ಆಯ್ಕೆ ಬಯಸಿದ್ದಾರೆ. ಅಕ್ಟೋಬರ್ 28ರಂದು ಮೊದಲ ಹಂತದ ಮತದಾನ ನಡೆದಿತ್ತು. ಮೂರನೇ ಹಂತದ ಮತದಾನ ನವೆಂಬರ್ 7 ರಂದು ನಡೆಯಲಿದ್ದು, ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

Click to comment

Leave a Reply

Your email address will not be published. Required fields are marked *