Connect with us

Cricket

2009 ರಿಂದ ಪ್ರತಿವರ್ಷ ಮಾಡ್ತಿದ್ದ ಸಾಧನೆ ಈ ವರ್ಷ ಕೊಹ್ಲಿಗೆ ಮಿಸ್

Published

on

– ಸಚಿನ್ ದಾಖಲೆ ಬ್ರೇಕ್ ಮಾಡಿದ ವಿರಾಟ್

ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಒಂದೇ ಒಂದು ಶತಕ ಸಿಡಿಸದೇ ಒಂದು ವರ್ಷವನ್ನು ಪೂರ್ಣಗೊಳಿಸಿದ್ದಾರೆ.

ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕಗಳ ಮೇಲೆ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. 2008ರಲ್ಲಿ ಭಾರತದ ಪರವಾಗಿ ಏಕದಿನ ಅಂತಾರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ ಕೊಹ್ಲಿ, 2009ರಲ್ಲಿ ತಮ್ಮ ಮೊದಲ ಶತಕವನ್ನು ಸಿಡಿಸಿದ್ದರು. ಸದ್ಯ ಏಕದಿನ ಮಾದರಿಯಲ್ಲಿ 43 ಶತಕ ಸಿಡಿಸಿರುವ ಕೊಹ್ಲಿ, ರನ್ ಮಷಿನ್ ಎಂಬ ಹೆಸರು ಪಡೆದು ಮುನ್ನುಗ್ಗುತ್ತಿದ್ದಾರೆ.

2009ರಲ್ಲಿ ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಮೊದಲ ಶತಕ ಸಿಡಿಸಿದ್ದರು. ಅಂದಿನಿಂದ ಬರೋಬ್ಬರಿ 11 ವರ್ಷ ಎಲ್ಲ ವರ್ಷದಲ್ಲೂ ಕೊಹ್ಲಿ ಸತತವಾಗಿ ಶತಕವನ್ನು ಸಿಡಿಸಿಕೊಂಡು ಬಂದಿದ್ದರು. ಆದರೆ ಕೊರೊನಾ ಕಾರಣದಿಂದ ಸ್ವಲ್ಪ ಸಮಯದ ಕಾಲ ಕ್ರಿಕೆಟ್ ಚಟುವಟಿಕೆ ನಿಂತು ಹೋಗಿತ್ತು. ನಂತರ ಐಪಿಎಲ್ ಆರಂಭವಾದರೂ ಕೊಹ್ಲಿ ಶತಕ ಸಿಡಿಸಲಿಲ್ಲ. ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲೂ ಅವರು ಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ.

ಈ ಮೂಲಕ ತಾನು 11 ವರ್ಷದಿಂದ ಕಾಪಾಡಿಕೊಂಡು ಬಂದಿದ್ದ ಸಾಧನೆಯನ್ನು ಈ ವರ್ಷ ಅವರು ಕೈಚೆಲ್ಲಿದ್ದಾರೆ. ಈ ವರ್ಷ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 6 ಮತ್ತು ನ್ಯೂಜಿಲೆಂಡ್ ವಿರುದ್ಧ 4 ಪಂದ್ಯಗಳನ್ನು ಸೇರಿ ಒಟ್ಟು 10 ಏಕದಿನ ಪಂದ್ಯಗಳನ್ನು ಆಡಿದ್ದು, ಈ ಪಂದ್ಯಗಳಲ್ಲಿ 47.88 ಸರಾಸರಿಯಲ್ಲಿ ಒಟ್ಟು 431 ರನ್ ಗಳಿಸಿದ್ದಾರೆ. ಸದ್ಯ ನಡೆಯುತ್ತಿರುವ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಅರ್ಧಶತಕ ಸಿಡಿಸಿದ ಕೊಹ್ಲಿ ಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ.

ಸಚಿನ್ ದಾಖಲೆ ಬ್ರೇಕ್
ವಿರಾಟ್ ಕೊಹ್ಲಿ ವೇಗವಾಗಿ 12 ಸಾವಿರ ಏಕದಿನ ರನ್ ಗಳಿಸಿದ ಸಚಿನ್ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ. ಸಚಿನ್ ಅವರು 12 ಸಾವಿರ ಏಕದಿನ ರನ್ ಹೊಡೆಯಲು ಬರೋಬ್ಬರಿ 300 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ ಕೊಹ್ಲಿ ಕೇವಲ 241 ಇನ್ನಿಂಗ್ಸ್ ನಲ್ಲಿ 12 ಸಾವಿರ ರನ್ ಪೂರೈಸಿ ಸಚಿನ್ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ವೇಗವಾಗಿ 12 ಸಾವಿರ ರನ್ ಗಡಿ ದಾಟಿದ ಆಟಗಾರ ಎನಿಸಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in