Saturday, 25th May 2019

Recent News

ಒಂದೇ ಪಂದ್ಯದಲ್ಲಿ ಕೊಹ್ಲಿ 3 ವಿಶೇಷ ಸಾಧನೆ ನಿರ್ಮಾಣ!

ವಿಶಾಖಪಟ್ಟಣ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಲ್ಲಿ ನಡೆಸುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 10 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. 212 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕೊಹ್ಲಿ 205 ಇನ್ನಿಂಗ್ಸ್ ಗಳಲ್ಲಿ 92.51 ಸ್ಟ್ರೈಕ್ ರೇಟ್‍ನಲ್ಲಿ 10 ಸಾವಿರ ರನ್ ಪೂರೈಸಿದ್ದಾರೆ.

ವಿಶ್ವ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ 13ನೇ ಆಟಗಾರ, ಭಾರತದ ಪರ 5ನೇ ಆಟಗಾರ ಕೊಹ್ಲಿ ಆಗಿದ್ದಾರೆ. ಈ ಹಿಂದೆ 2001ರ ಮಾರ್ಚ್ ನಲ್ಲಿ ಸಚಿನ್ ತೆಂಡೂಲ್ಕರ್ 266 ಪಂದ್ಯ, 259 ಇನ್ನಿಂಗ್ಸ್ ಗಳಲ್ಲಿ 10 ಸಾವಿರ ರನ್ ಪೂರೈಸಿದ್ದರು. ಅಲ್ಲದೇ ಗಂಗೂಲಿ 263 ಇನ್ನಿಂಗ್ಸ್, 272 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಉಳಿದಂತೆ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್, 272 ಪಂದ್ಯ, 266 ಇನ್ನಿಂಗ್ಸ್, ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಜ್ಯಾಕ್ ಕಾಲಿಸ್ 286 ಪಂದ್ಯ, 272 ಇನ್ನಿಂಗ್ಸ್, ಧೋನಿ 320 ಪಂದ್ಯ, 273 ಇನ್ನಿಂಗ್ಸ್, ಬ್ರಿಯಾನ್ ಲಾರಾ 287 ಪಂದ್ಯ, 278 ಇನ್ನಿಂಗ್ಸ್ ಗಳಲ್ಲಿ 10 ಸಾವಿರ ರನ್ ಸಿಡಿಸಿದ ಸಾಧನೆ ಮಾಡಿದ್ದರು.

ಇದೇ ಪಂದ್ಯದಲ್ಲಿ ಮತ್ತೊಂದು ಸಾಧನೆಯನ್ನು ಕೊಹ್ಲಿ ನಿರ್ಮಿಸಿದ್ದಾರೆ. ಕೊಹ್ಲಿ ತವರು ನೆಲದಲ್ಲಿ ಕೇವಲ 78 ಇನ್ನಿಂಗ್ಸ್ ಗಳಲ್ಲಿ ಏಕದಿನ ಕ್ರಿಕೆಟ್‍ನಲ್ಲಿ 4 ಸಾವಿರ ರನ್ ಪೂರೈಸಿದ್ದಾರೆ. ಈ ಹಿಂದೆ ಎಬಿಡಿ ವಿಲಿಯರ್ಸ್ ದಕ್ಷಿಣ ಆಫ್ರಿಕಾದಲ್ಲಿ 91 ಇನ್ನಿಂಗ್ಸ್ ಗಳಲ್ಲಿ 4 ಸಾವಿರ ಪೂರೈಸಿದ್ದರು. ಕೊಹ್ಲಿ ಅವರ ಹೆಸರಿನಲ್ಲಿ ಈಗಾಗಲೇ 36 ಶತಕ, 48 ಅರ್ಧ ಶತಕಗಳು ದಾಖಲಾಗಿದೆ.

ವಿಶಾಖಪಟ್ಟಣ ಕ್ರೀಡಾಂಗಣದಲ್ಲಿ ಕೊಹ್ಲಿ ಇದುವರೆಗೂ 4 ಏಕದಿನ ಪಂದ್ಯಗಳನ್ನು ಆಡಿದ್ದು 118, 117, 99, 65 ರನ್ ಹಾಗೂ ಟೆಸ್ಟ್ ಪಂದ್ಯದಲ್ಲಿ 167 ರನ್, 81 ರನ್ ಸಿಡಿಸಿ ರನ್ ಹೊಳೆ ಹರಿಸಿದ್ದರು. ಇಂದಿನ ಪಂದ್ಯದಲ್ಲೂ ತಮ್ಮ ಬ್ಯಾಟಿಂಗ್ ಬಲವನ್ನು ಮುಂದುವರಿಸಿರುವ ಕೊಹ್ಲಿ 56 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಅರ್ಧ ಶತಕದ ಬಳಿಕ ತಮ್ಮ ಆಕ್ರಮಣಕಾರಿ ಮುಂದುವರಿಸಿದ ಕೊಹ್ಲಿ 129 ಎಸೆತಗಳಲ್ಲಿ 13 ಬೌಂಡರಿ, 4 ಸಿಕ್ಸರ್ ನೆರವಿನಿಂದ 157 ರನ್ ಸಿಡಿಸಿ ಔಟಾಗದೆ ಉಳಿದರು. 50 ಓವರ್ ಗಳಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 321 ರನ್ ಪೂರೈಸಿದೆ. ಪಂದ್ಯದಲ್ಲಿ ಕೊಹ್ಲಿಗೆ ಸಾಥ್ ನೀಡಿದ ರಾಯುಡು 80 ಎಸೆತಗಳಲ್ಲಿ 73 ರನ್ ಸಿಡಿಸಿ ಔಟಾದರು.

ಉಳಿದಂತೆ ಕೊಹ್ಲಿ ವಿಂಡೀಸ್ ವಿರುದ್ಧ ದ ಭಾರತದ ಪರ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಕೊಹ್ಲಿ ವಿಂಡೀಸ್ ವಿರುದ್ಧದ 29 ನೇ ಇನ್ನಿಂಗ್ಸ್ ನಲ್ಲಿ 1,574 ರನ್ ಗಳಿಸಿದ್ದಾರೆ. ಈ ಮೂಲಕ 39 ಇನ್ನಿಂಗ್ಸ್ ಗಳಲ್ಲಿ ಸಚಿನ್ ತೆಂಡೂಲ್ಕರ್ 1,573 ರನ್ ಗಳಿಸಿದ್ದರು. ಅಲ್ಲದೇ ವಿಂಡೀಸ್ ವಿರುದ್ಧ ಅತೀ ಹೆಚ್ಚು ಶತಕಗಳನ್ನು ಸಿಡಿಸಿದ ಆಟಗಾರರಾಗಿದ್ದು, 6 ಶತಕಗಳನ್ನು ಸಿಡಿಸಿದ್ದಾರೆ. ಈ ಹಿಂದೆ ಗಿಬ್ಸ್, ಎಬಿಡಿ ವಿಲಿಯರ್ಸ್, ಅಮ್ಲ 5 ಶತಕಗಳನ್ನು ಸಿಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *