Friday, 15th November 2019

Recent News

ಕಸ ಗುಡಿಸುವ ಮಹಿಳೆಯಿಂದ ರೋಗಿಗೆ ಇಂಜೆಕ್ಷನ್

ನವದೆಹಲಿ: ಕಸ ಗುಡಿಸುವ ಮಹಿಳೆಯೊಬ್ಬಳು ರೋಗಿಗೆ ಇಂಜೆಕ್ಷನ್ ನೀಡಲು ಮುಂದಾದ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯ ಹರಿನಗರದ ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ನಡೆದಿದೆ.

ಮಹಿಳೆ ರೋಗಿಗೆ ಇಂಜೆಕ್ಷನ್ ನೀಡಲು ಮುಂದಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮಹಿಳೆ ರೋಗಿಯ ಕೈಹಿಡಿದುಕೊಂಡು ಇಂಜೆಕ್ಷನ್ ನೀಡಲು ಮುಂದಾಗುತ್ತಾಳೆ. ಈ ವೇಳೆ ವ್ಯಕ್ತಿಯೊಬ್ಬರು ವಿಡಿಯೋ ಮಾಡುತ್ತಿರುವುದನ್ನು ನೋಡಿದ ಮಹಿಳೆ ಇಂಜೆಕ್ಷನ್ ನೀಡದೇ ಸುಮ್ಮನಾಗುತ್ತಾಳೆ.

ಈ ವಿಡಿಯೋ ನೋಡಿದವರು ಆಘಾತಗೊಂಡಿದ್ದಾರೆ. ಅಲ್ಲದೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯ ಮುಖ್ಯಸ್ಥ ತನಿಖೆ ಶುರು ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆಸ್ಪತ್ರೆ ಮ್ಯಾನೇಜಿಂಗ್ ಡೈರೆಕ್ಟರ್, ನಾನು ಕೂಡ ಈ ವಿಡಿಯೋವನ್ನು ನೋಡಿದ್ದೇನೆ. ಅಲ್ಲದೆ ತನಿಖೆ ನಡೆಸಲು ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆನ್ ಡ್ಯೂಟಿ ನರ್ಸ್ ಅನ್ನು ಸಸ್ಪೆಂಡ್ ಮಾಡಲಾಗಿದೆ. ಈ ಬಗ್ಗೆ ರೋಗಿಯ ಕಡೆಯಿಂದ ಯಾವುದೇ ದೂರು ದಾಖಲಾಗಿಲ್ಲ. ಆದರೆ ಘಟನೆ ಬಗ್ಗೆ ಮಾಹಿತಿ ಪಡೆಯಲು ತನಿಖೆ ಶುರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಡಿಯೋವನ್ನು ವಾರ್ಡ್ ನಂಬರ್ 4ರಲ್ಲಿ ಸೆರೆ ಹಿಡಿಯಲಾಗಿದ್ದು, ಈ ಘಟನೆ ಯಾವಾಗ ನಡೆದಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ. ಅಲ್ಲದೆ ಈ ಘಟನೆಗೆ ಕಾರಣ ಆಗಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ.

Leave a Reply

Your email address will not be published. Required fields are marked *