Connect with us

Chikkamagaluru

ರಂಭಾಪುರಿ ಶ್ರೀಗಳ ಪಾದಪೂಜೆ ಮಾಡಿದ ವಿನಯ್ ಗುರೂಜಿ

Published

on

– ಶ್ರೀಚಕ್ರವನ್ನ ರೇಣುಕಾಚಾರ್ಯ ಪ್ರತಿಮೆ ಕೆಳಗಿಡಲು ಮನವಿ

ಚಿಕ್ಕಮಗಳೂರು: ವಿನಯ್ ಗುರುಜಿ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಶ್ರೀಗಳ ಪಾದ ಪೂಜೆ ನೆರವೇರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಗ್ರಾಮದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ವಿನಯ್ ಗುರೂಜಿ, ಪಂಚಪೀಠಗಳಲ್ಲಿ ಮೊದಲನೇ ಪೀಠವಾದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪಠದ ಶ್ರೀಗಳ ಪಾದಪೂಜೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ್ದ ವಿನಯ್ ಗುರೂಜಿ, ರಂಭಾಪುರಿ ಶ್ರೀಗಳಾದ ಶ್ರೀ ವೀರ ಸೋಮೇಶ್ವರ ಸ್ವಾಮೀಜಿ ಪಾದಪೂಜೆ ಮಾಡಿ ಪುಷ್ಪಾರ್ಚನೆ ಗೈದಿದ್ದಾರೆ.

ವಿನಯ್ ಗುರೂಜಿ ಇತ್ತೀಚಿಗೆ ಕಾಶಿಗೆ ಹೋಗಿ ಬಂದಿದ್ದರು. ಆಗ ಅಲ್ಲಿಂದ ಶ್ರೀಚಕ್ರ ತಂದಿದ್ದರು. ಅದನ್ನು ರಂಭಾಪುರಿ ಪೀಠಕ್ಕೆ ನೀಡಬೇಕೆಂದು ವಿನಯ್ ಗುರೂಜಿಗೆ ಅವರ ಗುರುಗಳ ಆಜ್ಞೆಯಾಗಿತ್ತಂತೆ. ಈ ಹಿನ್ನೆಲೆ ಇಂದು ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ರಂಭಾಪುರಿ ಶ್ರೀಗಳಿಗೆ ಪಾದಪೂಜೆ ಮಾಡಿ, ಪುಷ್ಪಾರ್ಚನೆ ಮಾಡಿ, ಶ್ರೀ ಚಕ್ರ ನೀಡಿದ್ದಾರೆ.

ಪ್ರತಿಮೆ ಕೆಳಗೆ ಶ್ರೀಚಕ್ರ ಇಡುವಂತೆ ಮನವಿ: ಇತ್ತೀಚೆಗೆ ಕಾಶಿಗೆ ಹೋಗಿದ್ದ ವಿನಯ್ ಗುರೂಜಿ, ಎರಡು ಶ್ರೀಚಕ್ರಗಳನ್ನು ತಂದಿದ್ದರು. ಅದರಲ್ಲಿ ಒಂದನ್ನು ರಂಭಾಪುರಿ ಪೀಠಕ್ಕೆ ನೀಡಿದ್ದು, ಶೀಘ್ರದಲ್ಲೇ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯರ 61 ಅಡಿ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ. ಆ ಪ್ರತಿಮೆ ಕೆಳಗೆ ಶ್ರೀಚಕ್ರ ಇಡುವಂತೆ ವಿನಯ್ ಗುರೂಜಿ ರಂಭಾಪುರಿ ಶ್ರೀಗಳಿಗೆ ಮನವಿ ಮಾಡಿದ್ದಾರೆ. ಇಂದು ಬೆಳಗ್ಗೆ ರಂಭಾಪುರಿ ಪೀಠಕ್ಕೆ ಆಗಮಿಸಿದ ವಿನಯ್ ಗುರೂಜಿ, ಕ್ಷೇತ್ರನಾಥ ವೀರಭದ್ರ ಸ್ವಾಮಿಗೆ ತಾವೇ ಪೂಜೆ ಮಾಡಿ, ದರ್ಶನ ಪಡೆದಿದ್ದಾರೆ. ಮಠದ ಆವರಣದಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಳೆದು, ರಂಭಾಪುರಿ ಶ್ರೀಗಳ ಜೊತೆಯೂ ದೀರ್ಘ ಸಮಾಲೋಚನೆ ನಡೆಸಿದ್ದಾರೆ.

ರಾಜಕಾರಣಿಗಳು ವಿನಯ್ ಗುರೂಜಿ ಪರಮ ಭಕ್ತರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶ್ರೀನಿವಾಸಪುರ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಕುಮಾರ್ ವಿನಯ್ ಗುರೂಜಿಯವರ ಪರಮ ಭಕ್ತರು ಹಾಗೂ ಈ ಹಿಂದೆ ವಿನಯ್ ಗುರೂಜಿಗೆ ಪಾದಪೂಜೆ ಸಹ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶೃಂಗೇರಿ ಶಾರದಾಂಬೆ ಹಾಗೂ ಕಿಗ್ಗಾ ಋಶ್ಯಶೃಂಗೇಶ್ವರನ ದೇವಾಲಯಕ್ಕೆ ಬಂದಾಗ ವಿನಯ್ ಗುರೂಜಿಯನ್ನು ಭೇಟಿ ಮಾಡದೆ ಹೋಗುವುದಿಲ್ಲ. ಇವರಷ್ಟೇ ಅಲ್ಲ, ಬಹುತೇಕ ರಾಜಕಾರಣಿಗಳು ವಿನಯ್ ಗುರೂಜಿಯ ಭಕ್ತರಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ವಿನಯ್ ಗುರೂಜಿ ಭಕ್ತರಾಗಿದ್ದು, ಅವರ ಮಠದಲ್ಲೇ ಹೋಮ ಕೂಡ ನಡೆಸಿದ್ದರು.

Click to comment

Leave a Reply

Your email address will not be published. Required fields are marked *