Tuesday, 21st May 2019

Recent News

ದೇಹದಾನ ಮಾಡಲು ಮುಂದಾದ ಪ್ರಿಯಾಂಕ್ ಖರ್ಗೆ ಕ್ಷೇತ್ರದ ಗ್ರಾಮಸ್ಥರು

-ಕಚೇರಿ ನವೀಕರಣಕ್ಕೆ ಲಕ್ಷ ಖರ್ಚು ಮಾಡುವ ಸಚಿವರೇ ಇಲ್ಲಿ ನೋಡಿ

ಕಲಬುರಗಿ: ಮರಣದ ನಂತರವು ಪರರಿಗೆ ನಮ್ಮ ದೇಹ ಉಪಯೋಗವಾಗಲಿ ಅಂತಾ ದೇಹದಾನ ಮಾಡುವದನ್ನು ನೋಡಿದ್ದೇವೆ. ಆದರೆ ಕಲಬುರಗಿ ಜಿಲ್ಲೆಯ ಭಂಕುರ ಗ್ರಾಮದಲ್ಲಿ ಮರಣದ ನಂತರ ಗ್ರಾಮದಲ್ಲಿ ಹೂಳಲು ಸ್ಥಳವಿಲ್ಲದ ಕಾರಣ ದೇಹದಾನ ಮಾಡಿದ್ದಾರೆ. ದುರಂತ ಅಂದರೆ ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರದ ಜನರ ಕಥೆ.

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಭಂಕುರ ಗ್ರಾಮದ ನಿವಾಸಿಗಳು ದೇಹದಾನ ಮಾಡಲು ಮುಂದಾಗುತ್ತಿದ್ದಾರೆ. ಈ ಗ್ರಾಮದಲ್ಲಿ ಈಗಾಗಲೇ 20ಕ್ಕೂ ಅಧಿಕ ಜನ ಅವರ ದೇಹವನ್ನು ಕಲಬುರಗಿಯ ಎಮ್‍ಆರ್‍ಎಂಸಿ ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ದಾರೆ. ಇಲ್ಲಿನ ಜನ ಈ ರೀತಿ ನಿರ್ಧಾರ ಕೈಗೊಳ್ಳುವುದಕ್ಕೆ ಪ್ರಮುಖ ಕಾರಣವೆಂದ್ರೆ ಈ ಗ್ರಾಮದಲ್ಲಿ ಕೇವಲ 33 ಗುಂಟೆ ಸ್ಮಶಾನವಿದೆ. ಹೀಗಾಗಿ ಯಾರಾದ್ರು ಮೃತಪಟ್ಟರೆ ಅವರ ದೇಹ ಹೂಳಲು ಸ್ಥಳವಿಲ್ಲ. ಆದ್ದರಿಂದ ದೇಹದಾನ ಮಾಡಲು ಇಲ್ಲಿನ ಗ್ರಾಮಸ್ಥರು ಮುಂದಾಗಿದ್ದು, ಈಗಾಗಲೇ ಭಂಕುರ ಗ್ರಾಮದಲ್ಲಿ 20 ಕ್ಕು ಹೆಚ್ಚು ಜನ ದೇಹದಾನ ಮಾಡಿದ್ದಾರೆ.

ಈ ಸಮಸ್ಯೆ ಬಗೆಹರಿಸುವಂತೆ ಕ್ಷೇತ್ರದ ಶಾಸಕ ಹಾಗು ಸಚಿವ ಪ್ರಿಯಾಂಕ್ ಖರ್ಗೆ ಅವರ ಬಳಿ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ. ಈ ಸಮಸ್ಯೆ ಕುರಿತು 2015ರಲ್ಲಿಯೇ ವಿಧಾನ ಪರಿಷತ್‍ನಲ್ಲಿ ಮೋಟಮ್ಮ ಸದನದ ಗಮನ ಸಹ ಸೆಳೆದಿದ್ದಾರೆ. ಇಷ್ಟಾದ್ರು ಸಹ ಇಲ್ಲಿಯವರೆಗೆ 10 ಸಾವಿರ ಜನಸಂಖ್ಯೆಯಿರುವ ಗ್ರಾಮಕ್ಕೆ ಇರುವ 33 ಗುಂಟೆ ಸ್ಮಶಾನ ಭೂಮಿಯಲ್ಲಿಯೇ, ಹೂತಿರುವ ಹೆಣ ತೆಗೆದು ಬೇರೆಯವರನ್ನು ಅದೇ ಸ್ಮಶಾನ ಭೂಮಿಯಲ್ಲಿ ಹೂಳುತ್ತಿದ್ದಾರೆ. ಈ ಸಮಸ್ಯೆ ಅರಿತ ಇನ್ನು ಕೆಲವರು ಬೇರೆಯವರಿಗೆ ತಮ್ಮ ದೇಹ ಪ್ರಯೋಜನವಾಗಲಿ ಅಂತಾ ಸಹ ದೇಹದಾನ ಮಾಡಿದ್ದಾರೆ.

ತಮ್ಮ ಕಚೇರಿ ನವೀಕರಣಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಸಚಿವ ಪ್ರಿಯಾಂಕ್ ಖರ್ಗೆ, ಕ್ಷೇತ್ರದಲ್ಲಿನ ಜನರ ಈ ಗಂಭೀರ ಸಮಸ್ಯೆಗೆ ಇಲ್ಲಿಯವರೆಗೆ ಪರಿಹಾರ ನೀಡದಿರುವುದು ನಿಜಕ್ಕು ದುರಂತವೇ ಸರಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Leave a Reply

Your email address will not be published. Required fields are marked *