Sunday, 22nd September 2019

ರಿಪೇರಿ ಮಾಡಿಸದ ರಸ್ತೆಯಲ್ಲಿ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ

ಹಾಸನ: ಹಾಳಾಗಿ ಕೆಸರುಮಯವಾಗಿದ್ದ ರಸ್ತೆಯನ್ನು ಅಧಿಕಾರಿಗಳು ರಿಪೇರಿ ಮಾಡಿಸದ ಕಾರಣಕ್ಕೆ ಗ್ರಾಮಸ್ಥರು ರಸ್ತೆಯಲ್ಲಿಯೇ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಅರಕಲಗೂಡು ತಾಲೂಕಿನ ಅಲ್ಲಾಪಟ್ಟಣ ಗ್ರಾಮಸ್ಥರು ರಸ್ತೆ ಮಧ್ಯೆ ನಾಟಿ ಮಾಡಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ಒಂದೂವರೆ ತಿಂಗಳ ಮಳೆಯಿಂದ ಅಲ್ಲಾಪಟ್ಟಣ ಗ್ರಾಮದ ರಸ್ತೆ ಕೆಸರಿನ ಗದ್ದೆಯಾಗಿದೆ. ಹಲವು ಬಾರಿ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈವರೆಗೂ ಯಾವ ಅಧಿಕಾರಿ ಅಥವಾ ಜನಪ್ರತಿನಿಧಿ ಗ್ರಾಮದ ರಸ್ತೆ ರಿಪೇರಿ ಬಗ್ಗೆ ಕ್ರಮ ತೆಗೆದುಕೊಂಡಿರಲಿಲ್ಲ.

ಗುಂಡಿಗಳು ಬಿದ್ದು, ಕೆಸರುಮಯವಾಗಿದ್ದ ರಸ್ತೆಯಲ್ಲಿ ಓದಾಡುವಾಗ ನಾಲ್ಕೈದು ಗ್ರಾಮಸ್ಥರು ಕೈ ಕಾಲು ಮುರಿದುಕೊಂಡಿದ್ದಾರೆ. ಈ ರಸ್ತೆಯಲ್ಲಿ ಸರಿಯಾಗಿ ವಾಹನ ಚಲಾಯಿಸಲು ಆಗದೆ ಸವಾರರು ಪರದಾಡುತ್ತಿದ್ದಾರೆ.

ಅಧಿಕಾರಿಗಳು, ಜನಪ್ರತಿನಿಧಿಗಳು ಇಂದು ರಸ್ತೆ ರಿಪೇರಿ ಮಾಡುತ್ತಾರೆ. ನಾಳೆ ಮಾಡುತ್ತಾರೆ ಎಂದು ಗ್ರಾಮಸ್ಥರು ಕಾದು ಕಾದು ಬೇಸತ್ತು ಹೋಗಿದ್ದರು. ಆದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮದ ಅರ್ಧ ಕಿ.ಮೀ ರಸ್ತೆಗೆ ಬತ್ತದ ಪೈರು ನಾಟಿ ಮಾಡಿ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹರಿಹಾಯ್ದಿದ್ದಾರೆ.

Leave a Reply

Your email address will not be published. Required fields are marked *