Monday, 16th December 2019

ಸಚಿವ ಶಿವಾನಂದ ಪಾಟೀಲ್ ಕಾರಿಗೆ ರೈತರ ಮುತ್ತಿಗೆ, ಗನ್‍ಮ್ಯಾನ್‍ನಿಂದ ಹಲ್ಲೆ

ವಿಜಯಪುರ: ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರ ಕಾರಿಗೆ ರೈತರು ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಸಚಿವರ ಗನ್‍ಮ್ಯಾನ್ ಪ್ರತಿಭಟನಕಾರರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಇಂದು ಉದ್ದೇಶಿತ ಸಕ್ಕರೆ ಕಾರ್ಖಾನೆಗೆ ಭೂಸ್ವಾಧೀನ ಪಡೆಸಿಕೊಂಡಿದ್ದ ಕೆಐಎಡಿಬಿಗೆ ಭೂಮಿ ನೀಡಿದ್ದ ರೈತರಿಗೆ ಹಣ ಸಂದಾಯವಾಗದ ಹಿನ್ನೆಲೆ ರೈತರು ಪ್ರತಿಭಟನೆ ನಡೆಸಿ ಸಚಿವ ಶಿವಾನಂದ ಪಾಟೀಲರ ಕಾರಿಗೆ ಮುತ್ತಿಗೆ ಹಾಕಿದರು.

ಈ ವೇಳೆ ಪ್ರತಿಭಟನೆ ಮಾಡುತ್ತಿದ್ದ ಮಾಜಿ ಸಚಿವ ಬೆಳ್ಳುಬ್ಬಿ ಪುತ್ರ ಮಲ್ಲನಗೌಡ ಬೆಳ್ಳುಬ್ಬಿ ಅವರ ಮೇಲೆ ಸಚಿವರ ಎದುರಲ್ಲೇ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ರೈತರು ಕಾರಿಗೆ ಮುತ್ತಿಗೆ ಹಾಕಿದಾಗ ಕೆಳಗಿಳಿದ ಸಚಿವ ಶಿವಾನಂದ ಪಾಟೀಲ್ ದಾರಿ ಬಿಡಲು ಸೂಚಿಸಿದರು. ಇದಕ್ಕೆ ದಾರಿ ಬಿಡುವುದಿಲ್ಲ ಎಂದು ಮಲ್ಲನಗೌಡ ಬೆಳ್ಳುಬ್ಬಿ ಹೇಳಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಸಚಿವರ ಗನ್‍ಮ್ಯಾನ್ ಹಲ್ಲೆ ಮಾಡಿದ್ದಾನೆ ಎಂದು ಮಲ್ಲನಗೌಡ ಬೆಳ್ಳುಬ್ಬಿ ಆರೋಪಿಸಿದ್ದಾರೆ.

ಸಚಿವ ಶಿವಾನಂದ ಪಾಟೀಲ್ ಮುಂದೆಯೇ ಗನ್‍ಮ್ಯಾನ್ ಮತ್ತು ಮಲ್ಲನಗೌಡ ಪರಸ್ಪರ ಹೊಡೆದಾಟ ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಮಲ್ಲನಗೌಡರನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *