Connect with us

Corona

ಕೊರೊನಾ ಪಾಸಿಟಿವ್ ಇರೋ ವ್ಯಕ್ತಿ ಓಡಾಟ- ಆತಂಕಕ್ಕೀಡಾದ ಜನ

Published

on

ವಿಜಯಪುರ: ಕೊರೊನಾ ಪಾಸಿಟಿವ್ ಪೀಡಿತ ವ್ಯಕ್ತಿ ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ ಪಟ್ಟಣಗಳಲ್ಲಿ ಓಡಾಟ ಮಾಡಿ ಆತಂಕ ಮೂಡಿಸಿದ್ದಾನೆ.

ಜಿಲ್ಲೆಯ ಇಂಡಿಯಿಂದ ಬೈಕಿನಲ್ಲಿ ಸಹೋದರನ ಜೊತೆಗೆ ಲಚ್ಯಾಣ ಗ್ರಾಮಕ್ಕೂ ತೆರಳಿರುವ ವ್ಯಕ್ತಿ ಬುಧವಾರ ದಿಢೀರನೆ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಪ್ರತ್ಯಕ್ಷನಾಗಿದ್ದಾನೆ. ಈತ ಕಲಬುರಗಿ ಜಿಲ್ಲೆಯಲ್ಲಿ 14 ದಿನಗಳ ಕಾಲ ಇನಸ್ಟಿಟ್ಯೂಷನಲ್ ಕ್ವಾರಂಟೈನ್ ಮುಗಿಸಿದ್ದಾನೆ.

ಮೇ 16 ರಂದು ಮುಂಬೈನಿಂದ ಪತ್ನಿ ತವರೂರಿಗೆ ತೆರಳಿದ್ದ ವೇಳೆ ಕ್ವಾರಂಟೈನ್ ಗೆ ಒಳಗಾಗಿದ್ದ ಈತ ಕಲಬುರಗಿ ಜಿಲ್ಲೆ ಜೀವರ್ಗಿ ತಾಲೂಕಿನ ಜೀರಟಿಗಿ ಗ್ರಾಮಕ್ಕೆ ತೆರಳಿದ್ದ. ಆಗಲೇ ಗಂಟಲು ದ್ರವ ಮಾದರಿ ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ಆದರೆ ಸ್ವಾಬ್ ವರದಿ ಬರುವ ಮುನ್ನವೇ ಕ್ವಾರಂಟೈನ್ ಅವಧಿ ಮುಗಿದ ಕಾರಣ ಬಿಡುಗಡೆ ಮಾಡಲಾಗಿತ್ತು.

ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಅದಾದ ಮೇಲೆ ಆತ ವಿಜಯಪುರ ಜಿಲ್ಲೆಗೆ ಆಗಮಿಸಿ ಓಡಾಡಿದ್ದಾನೆ. ಇದರ ಬಗ್ಗೆ ಕಲಬುರಗಿಯ ಆಧಿಕಾರಿಗಳು ವಿಜಯಪುರ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಬುಧವಾರ ಅನಾರೋಗ್ಯದ ಕಾರಣ ಇಂಡಿ ಆಸ್ಪತ್ರೆಗೆ ಆಗಮಿಸಿದ್ದ. ಇದರ ಮಾಹಿತಿ ಪಡೆದು ವಿಜಯಪುರ ಜಿಲ್ಲಾಡಳಿತ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ರವಾನಿಸಿದೆ. ಆದರೆ ವ್ಯಕ್ತಿ ಒಡಾಡಿದ್ದಲ್ಲೆಲ್ಲ ಇದೀಗ ಭಯದ ವಾತಾವರಣ ನಿರ್ಮಾಣವಾಗಿದೆ.