Thursday, 25th April 2019

ನನ್ನ ಹಣದಿಂದ ಜೆಟ್ ಏರ್‍ವೇಸ್ ಉಳಿಸಿ: ಮಲ್ಯ ಸಾಲು ಸಾಲು ಟ್ವೀಟ್

– ಎನ್‍ಡಿಎ ಸರ್ಕಾರ ದ್ವಿಮುಖ ನೀತಿ ವಿರುದ್ಧ ಕಿಡಿ

ನವದೆಹಲಿ: ಜೆಟ್ ಏರ್‍ವೇಸ್ ಮುಖ್ಯಸ್ಥ ನರೇಶ್ ಗೋಯಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸ್ಥೆಯಿಂದ ಹೊರ ಬಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮದ್ಯದ ದೊರೆ ವಿಜಯ್ ಮಲ್ಯ, ನನ್ನ ಹಣವನ್ನ ನೀಡಿ ಜೆಟ್ ಏರ್‍ವೇಸ್ ಸಂಸ್ಥೆಯನ್ನು ಉಳಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಸರ್ಕಾರಿ ಬ್ಯಾಂಕುಗಳು ನನ್ನ ಹಣವನ್ನು ಪಡೆದುಕೊಂಡು ನಷ್ಟದಲ್ಲಿರುವ ಸಂಸ್ಥೆ ಉಳಿಸಬೇಕೆಂದು ಹೇಳಿದ್ದಾರೆ.

ದೇಶದ ರಾಷ್ಟ್ರೀಕೃತ ಬ್ಯಾಂಕ್‍ಗಳು ಜೆಟ್ ಏರ್‍ವೇಸ್ ಸಂಸ್ಥೆಯನ್ನು ಉಳಿಸಲು ಆರ್ಥಿಕ ಸಹಕಾರ ಘೋಷಣೆ ಮಾಡಿರುವುದು ಸಂತಸದ ವಿಚಾರ. ಇದೇ ರೀತಿ ನನ್ನ ಸಂಸ್ಥೆ ಕಿಂಗ್ ಫಿಶರ್ ಏರ್‍ಲೈನ್ಸ್ ಉಳಿಸಲು ಬ್ಯಾಂಕ್‍ಗಳು ಮುಂದಾಗಲಿ ಎಂಬುವುದು ನನ್ನ ಆಸೆಯಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಹೈಕೋರ್ಟ್ ಮುಂದೆ ನನ್ನ ಎಲ್ಲ ಆಸ್ತಿಯನ್ನು ಹಾಜರುಪಡಿಸಿದ್ದೇನೆ. ಈ ಆಸ್ತಿಗಳಿಂದ ಬ್ಯಾಂಕ್ ಮತ್ತು ನನಗೆ ಸಾಲ ನೀಡಿದ ಎಲ್ಲರಿಗೂ ಹಣ ಪಾವತಿಸಬಹುದಾಗಿದೆ. ಬ್ಯಾಂಕುಗಳು ನನ್ನ ಹಣವನ್ನ ಏಕೆ ಪಡೆಯುತ್ತಿಲ್ಲ ಎನ್ನುವುದು ಗೊತ್ತಾಗುತ್ತಿಲ್ಲ. ಹೀಗಾಗಿ ಇದೇ ಹಣವನ್ನು ನೀವು ಜೆಟ್ ಏರ್‍ವೇಸ್ ಸಂಸ್ಥೆಯನ್ನು ಉಳಿಸಲು ಬಳಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.

ಕಿಂಗ್ ಫಿಶರ್ ಏರ್‍ಲೈನ್ಸ್ ನಲ್ಲಿ 4 ಸಾವಿರ ಕೋಟಿ ಹಣವನ್ನು ಹೂಡಿಕೆ ಮಾಡಿದ್ದೇನೆ. ಅಂದು ನನ್ನ ಕಂಪನಿಯ ರಕ್ಷಣೆಗಾಗಿ ಯಾರು ಮುಂದಾಗಿಲಿಲ್ಲ. ಸಾರ್ವಜನಿಕರ ಉತ್ತಮ ಸೇವೆ ನೀಡುತ್ತಿದ್ದ ಕಂಪನಿ ಇಂದು ಇಲ್ಲದಂತಾಗಿದೆ. ಇದೊಂದು ಎನ್‍ಡಿಎ ಸರ್ಕಾರದ ದ್ವಿಮುಖ ಧೋರಣೆ ಇದಾಗಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾವಿರಾರು ಕೋಟಿ ನಷ್ಟದಿಂದ ಬಳಲುತ್ತಿದ್ದ ಜೆಟ್ ಏರ್‍ವೇಸ್ ಸಂಸ್ಥೆಯಿಂದ ನರೇಶ್ ಗೋಯಲ್ ಹಾಗು ಪತ್ನಿ ಅನಿತಾ ಹೊರ ಬಂದಿದ್ದಾರೆ. ಇಬ್ಬರು ಹೊರಬಂದ ಬಳಿಕ ಸಾರ್ವಜನಿಕ ರಂಗದ ಬ್ಯಾಂಕ್ ಗಳು 1500 ಕೋಟಿ ರೂ. ನೆರವು ನೀಡುವುದಾಗಿ ಘೋಷಿಸಿದೆ.

1993ರಲ್ಲಿ ನರೇಶ್ ಮತ್ತು ಅನಿತಾ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಜೆಟ್ ಏರ್‍ವೇಸ್ ಸುಮಾರು 7 ಸಾವಿರ ಕೋಟಿಗೂ ಅಧಿಕ ಸಾಲವನ್ನು ಮಾಡಿಕೊಂಡಿದೆ. 2013ರಲ್ಲಿ ಸಾಲದ ಸುಳಿಯಲ್ಲಿ ಸಂಸ್ಥೆ ಸಿಲುಕಿದ್ದಾಗ, ಅಬುದಾಭಿಯ ಎತಿಹಾದ್ ಏರ್‍ವೇಸ್ ಸಂಸ್ಥೆ ಶೇ.24ರಷ್ಟು (ಸುಮಾರು 4 ಸಾವಿರ ಕೋಟಿ) ಪಾಲನ್ನು ಖರೀದಿಸಿತ್ತು. ಇದೀಗ ಈ ಸಂಸ್ಥೆ ಮತ್ತೋರ್ವ ಹೂಡಿಕೆದಾರರ ನಿರೀಕ್ಷೆಯಲ್ಲಿದೆ.

Leave a Reply

Your email address will not be published. Required fields are marked *