Wednesday, 26th February 2020

ನೀವು ಪ್ರಾಮಾಣಿಕರಾಗಿದ್ರೆ, ಸಂಪೂರ್ಣ ಆಡಿಯೋ ಬಿಡುಗಡೆ ಮಾಡಿ – ಸಿಎಂಗೆ ಬಿಎಸ್‍ವೈ ಸವಾಲು

– ನಮಗೆ ಗೌರವವಿಟ್ಟು, ಸದನ ಸಮಿತಿಗೆ ತನಿಖೆ ಒಪ್ಪಿಸಿ
– ಸ್ಪೀಕರ್‌ಗೆ ಹಣ ಕೊಡುವ ವಿಚಾರದ ಮಾತುಕತೆಯಲ್ಲಿ ನಾನಿಲ್ಲ
– ಬೇಕಾದಂತೆ ಆಡಿಯೋವನ್ನು ಸೃಷ್ಟಿಸಿದ್ದಾರೆ

ಬೆಂಗಳೂರು: ಬಿಜೆಪಿಯ 104 ಶಾಸಕರು ವಿಶೇಷ ತನಿಖಾ ತಂಡ(ಎಸ್‍ಐಟಿ) ತನಿಖೆಗೆ ನೀಡುವುದನ್ನು ಒಪ್ಪುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ನಮಗೆ ಗೌರವ ನೀಡಿ ಸದನ ಸಮಿತಿಗೆ ತನಿಖೆ ಒಪ್ಪಿಸಬೇಕು ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಆಪರೇಷನ್ ಕಮಲ ಆಡಿಯೋ ವಿಚಾರವಾಗಿ ಸದನದಲ್ಲಿ ಮಾತನಾಡಿದ ಅವರು, ಯಾರೋ ಪಕ್ಷಕ್ಕೆ ಬರುವಂತೆ ಕರೆಯುತ್ತಿದ್ದಾರೆಂದು ಶರಣಗೌಡ ಹೇಳಿದಾಗ ಸಿಎಂ ಕುಮಾರಸ್ವಾಮಿ ಅವರು ಬೇಡವೆಂದು ಹೇಳಬೇಕಿತ್ತು. ಅದನ್ನು ಬಿಟ್ಟು ಶರಣಗೌಡನನ್ನು ಕಳುಹಿಸಿಕೊಟ್ಟು ರೆಕಾರ್ಡ್ ಮಾಡಿಸಿ, ಬೇಕಾದನ್ನು ತಿರುಚಿ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿ.ಎಸ್.ಯಡಿಯೂರಪ್ಪ ಅವರ ಮಾತಿಗೆ ಆಡಳಿತ ಪಕ್ಷಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲಹೊತ್ತು ಬಿಜೆಪಿ ಹಾಗೂ ಮೈತ್ರಿ ಸರ್ಕಾರದ ಶಾಸಕರು ವಾಗ್ದಾಳಿ ನಡೆಸಿದರು. ಬಳಿಕ ಮಾತು ಮುಂದುವರಿಸಿದ ಬಿ.ಎಸ್.ಯಡಿಯೂರಪ್ಪ ಅವರು, ಸಿಎಂ ಕುಮಾರಸ್ವಾಮಿ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಘಟಾನುಘಟಿಗಳ ಬಗ್ಗೆ ಹೇಳುತ್ತ ಪ್ರತಿಪಕ್ಷದ ಸದಸ್ಯರು ಇದ್ದರೆಂದು ಹೇಳಿದ್ದಾರೆ. ನಾನು ಇದ್ದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಅಂತ ಹೇಳಿದ್ದೆ. ಈಗಲೂ ನಾನು ಅದಕ್ಕೆ ಬದ್ಧನಾಗಿದ್ದೇನೆ. ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಹಣ ನೀಡುವ ವಿಚಾರವಾಗಿ ಮಾತನಾಡುವಾಗ ನಾನು ಇರಲಿಲ್ಲ. ಒಂದು ವೇಳೆ ಇದ್ದಿದ್ದರೆ ಈ ಕ್ಷಣವೇ ರಾಜೀನಾಮೆ ಕೊಡುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

ನನಗೆ ಮೋಸ ಮಾಡಲು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ನನ್ನ ಹತ್ತಿರ ಇರುವುದು ನಕಲಿ ಅಥವಾ ನಿಜವಾದ ಆಡಿಯೋ ಎನ್ನುವುದನ್ನು ತಿಳಿಯದೇ ಬಿಡುಗಡೆ ಮಾಡಿದ್ದು ಅಪರಾಧ. ಧ್ವನಿ ಸುರಳಿ 35 ನಿಮಿಷವಿದೆ. ಅದನ್ನು 2 ನಿಮಿಷಕ್ಕೆ ಇಳಿಸಿ ತಮಗೆ ಅನುಕೂಲವಾಗುವಂತೆ ಮಾಡಿ ರಾಜಕೀಯ ಷಡ್ಯಂತ್ರ ಮಾಡಿದ್ದಾರೆ. 50 ಕೋಟಿ ರೂ. ಕೊಡುವ ಸುದ್ದಿ ತಿಳಿದಾಗ ನೀವು ನೇರವಾಗಿ ಸ್ಪೀಕರ್ ಬಳಿ ಹೋಗಬೇಕಾಗಿತ್ತು. ಆ ರೀತಿ ಮಾಡಿದ್ದರೆ ದೇಶಾದ್ಯಂತ ಸುದ್ದಿಯಾಗುತ್ತಿರಲಿಲ್ಲ ಎಂದು ಆಡಳಿತ ಪಕ್ಷದ ವಿರುದ್ಧ ಅಸಮಾಧಾನವನ್ನು ಹೊರಹಾಕಿದರು.

ನಿಮ್ಮ ಉದ್ದೇಶವೇ ದುರುದ್ದೇಶದಿಂದ ಕೂಡಿದೆ. ನೀವು ಪ್ರಮಾಣಿಕವಾಗಿದ್ದರೆ ಸಂಪೂರ್ಣ ಆಡಿಯೋ ಬಿಡುಗಡೆ ಮಾಡಬೇಕಿತ್ತು. ಒಬ್ಬ ಸಿಎಂ ಆಗಿ, ರಾಜಕೀಯ ಕುತಂತ್ರ ಮಾಡುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಕುಮಾರಸ್ವಾಮಿ ವಿರುದ್ಧ ಗುಡುಗಿದರು.

ನಾನು 40 ವರ್ಷದಿಂದ ರಾಜಕೀಯ ಜೀವನದಲ್ಲಿ ಇದ್ದೇನೆ. ಸಾಮಾನ್ಯ ಕುಟುಂಬದಿಂದ ಬಂದ ನಾನು ಸಿಎಂ, ಉಪಮುಖ್ಯಮಂತ್ರಿಯಾಗಿದ್ದೇನೆ ಎಂದ ಅವರು, ಮುಖ್ಯಮಂತ್ರಿ ಸ್ಥಾನವನ್ನು ಸ್ವಾರ್ಥಕ್ಕೆ ಬಳಸಿಕೊಂಡು, ದುರುದ್ದೇಶದಿಂದ ನಡೆದುಕೊಂಡಿದ್ದೀರಿ. ಇದು ನಿಮಗೆ ಶೋಭೆ ತರುವುದಿಲ್ಲ ಎಂದು ಕುಟುಕಿದರು.

ವಿಧಾನಸಭಾ ಚುನಾವಣೆ ಬಳಿಕ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸುವಾಗ ಕುಮಾರಸ್ವಾಮಿ ಅವರು ಸಿಎಂ ಆಗುವುದು ಬೇಡವೆಂದು 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ರೆಸಾರ್ಟ್ ನಲ್ಲಿ ಪಟ್ಟು ಹಿಡಿದಿದ್ದರು. ಈಗ ಅವರು ನಿಮ್ಮ ಆಡಳಿತಕ್ಕೆ ಬೇಸತ್ತು ಹೋಗಿದ್ದಾರೆ. ಇದಕ್ಕೆ ನಾವು ಜವಾಬ್ದಾರರಲ್ಲ ಎಂದು ಮೈತ್ರಿ ಸರ್ಕಾರದ ವಿರುದ್ಧ ಚಾಟಿ ಬೀಸಿದರು.

ನಾವು ಮಾತ್ರ ಸತ್ಯಹರಿಶ್ಚಂದ್ರರು ಎಂದು ಪೋಸ್ ಕೊಡುವುದಕ್ಕೆ ನಿಮಗೆ ಯಾವ ನೈತಿಕ ಹಕ್ಕಿದೆ? ಒಬ್ಬರನ್ನು ವಿಧಾನದ ಪರಿಷತ್ ಸದಸ್ಯನಾಗಿ ಮಾಡಲು ಕೋಟ್ಯಂತರ ರೂಪಾಯಿ ಕೇಳಿದ್ರಿ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

ನಮ್ಮನ್ನ ನೀವು ಕೊಠಡಿಗೆ ಕರೆದು ಚರ್ಚೆ ಮಾಡಿದ್ದರೆ ಸದನದಲ್ಲಿ ಚರ್ಚೆ ಮಾಡುವ ಅವಕಾಶ ಇರುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಮುಂದೆ ಏನು ಮಾಡಬೇಕೆಂದು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಸದಸ್ಯರನ್ನು ಕೊಠಡಿಗೆ ಕರೆದು ಚರ್ಚೆ ಮಾಡಿ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಬಿಎಸ್‍ವೈ ಮನವಿ ಮಾಡಿಕೊಂಡರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *