Connect with us

Latest

ಪಾಕ್ ಸ್ಫೋಟಕ ನಾಶಗೊಳಿಸಿದ ಭಾರತೀಯ ಯೋಧರು – ವಿಡಿಯೋಗೆ ಭಾರೀ ಮೆಚ್ಚುಗೆ

Published

on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಗಡಿ ನಿಯಂತ್ರಣ ರೇಖೆ ಬಳಿ ಬಿದ್ದಿದ್ದ ಪಾಕಿಸ್ತಾನ ಸೇನೆಯ ಸ್ಫೋಟಕವನ್ನು ಭಾರತೀಯ ಯೋಧರು ನಾಶಗೊಳಿಸಿರುವ ವಿಡಿಯೋ ವೈರಲ್ ಆಗಿದೆ.

ಭಾನುವಾರ ಮೇಂದಾರ್ ಸೆಕ್ಟರ್ ನ ಬಾಲಕೋಟ್ ಪ್ರದೇಶದ ಮನೆಯೊಂದರ ಬಳಿ ಸ್ಫೋಟಕದ ಶೆಲ್ ಬಿದ್ದಿತ್ತು. ಇದನ್ನು ಕೆಲ ಗ್ರಾಮಸ್ಥರು ಗಮನಿಸಿದ್ದು, ಈ ಬಗ್ಗೆ ಸೇನಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷವೇ ಸೇನೆಯಲ್ಲಿನ ತಜ್ಞರು ಸ್ಥಳಕ್ಕೆ ಬಂದು ಸ್ಫೋಟಿಸದ ಮಾರ್ಟರ್ ಶೆಲ್ ಅನ್ನು ಸುರಕ್ಷಿತವಾಗಿ ನಾಶಗೊಳಿಸಿದ್ದಾರೆ.

ಇಬ್ಬರು ಸೈನಿಕರು ಸ್ಫೋಟಕವನ್ನು ನಾಶ ಮಾಡಿದ ಕಾರ್ಯಾಚರಣೆಯ ವಿಡಿಯೋವನ್ನು ಭಾರತೀಯ ಸೇನೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು ಯೋಧರ ಧೈರ್ಯ, ಶೌರ್ಯಕ್ಕೆ ಭಾರತೀಯರು ಸಲಂ ಹೊಡೆದಿದ್ದಾರೆ.

ಪಾಕಿಸ್ತಾನ ಪಡೆಗಳು ಶನಿವಾರ ಬಾಲಕೋಟ್ ಸೇರಿ ವಿವಿಧ ಕಡೆಗಳಲ್ಲಿ ಗ್ರಾಮಗಳನ್ನು ಗುರಿಯಾಗಿಸಿ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆ ಕೂಡಾ ಪ್ರತಿದಾಳಿ ನಡೆಸಿದೆ. ಆ ಬಳಿಕ ಭಾರತೀಯ ಶಿಬಿರವನ್ನು ಗುರಿಯಾಗಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಪಾಕಿಸ್ತಾನ ಸೇನೆ ಭಾನುವಾರ ರಾತ್ರಿ 10:30ರ ಹೊತ್ತಿಗೆ ಪೂಂಚ್ ಜಿಲ್ಲೆಯ ಬಾಲಕೋಟ್ ಸೆಕ್ಟರ್ ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತೀಯ ಭದ್ರತಾ ಪಡೆಗಳೂ ಕೂಡ ತಕ್ಕ ಪ್ರತ್ಯುತ್ತರ ಕೊಟ್ಟಿದೆ.

ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರರು ಮಾತನಾಡಿ, ಈ ವರ್ಷ ಪಾಕಿಸ್ತಾನ 2,050 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ತಿಳಿಸಿದ್ದಾರೆ. ಈ ದಾಳಿಗಳಲ್ಲಿ 21 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

2003 ರ ಕದನ ವಿರಾಮ ಒಪ್ಪಂದಕ್ಕೆ ಬದ್ಧರಾಗಿರಲು ಮತ್ತು ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಭಾರತವು ಪಾಕಿಸ್ತಾನಕ್ಕೆ ಪದೇ ಪದೇ ಕರೆ ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಹೀಗೆ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಉದ್ಧಟತನ ಪ್ರದರ್ಶಿಸಿದರೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ತಯಾರಾಗಿದೆ ಎಂದು ಎಚ್ಚರಿಸಿದ್ದಾರೆ.