Districts
ರಾಯಚೂರಿನಲ್ಲಿ ಮಕ್ಕಳು ವಠಾರ ಶಾಲೆಗೆ ಗೈರು- ಕೃಷಿ ಕೂಲಿಗೆ ಹಾಜರು

ರಾಯಚೂರು: ಕೋವಿಡ್ 19 ಹಿನ್ನೆಲೆ ಶಾಲೆಗಳು ಆರಂಭವಾಗುವುದು ಯಾವಾಗ ಅನ್ನೋದು ಇನ್ನೂ ಸ್ಪಷ್ಟತೆ ಯಾರಿಗೂ ಇಲ್ಲ. ಆದ್ರೆ ಸರ್ಕಾರ ಮಕ್ಕಳ ಅಕ್ಷರ ಅಭ್ಯಾಸ ನಿಲ್ಲಬಾರದು ಅಂತ ವಿದ್ಯಾಗಮ ಯೋಜನೆಯಡಿ ವಠಾರ ಶಾಲೆ ನಡೆಸುತ್ತಿದೆ. ಆದ್ರೆ ರಾಯಚೂರಿನಲ್ಲಿ ಗ್ರಾಮೀಣ ಭಾಗದ ಪೋಷಕರು ಮಾತ್ರ ಮಕ್ಕಳನ್ನ ಪಾಠಕ್ಕೆ ಕಳಿಸುವ ಬದಲು ಕೂಲಿಗೆ ಕಳುಹಿಸುತ್ತಿದ್ದಾರೆ. ಆ ಮಕ್ಕಳನ್ನ ಪುನಃ ಕರೆತಂದು ಪಾಠ ಮಾಡುವುದೇ ಜಿಲ್ಲೆಯ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.
ಮಹಾಮಾರಿಯಂತೆ ಎಲ್ಲೆಡೆ ಹಬ್ಬಿರೋ ಕೊರೊನಾ ಭೀತಿ ಮಕ್ಕಳ ಶೈಕ್ಷಣಿಕ ಹಕ್ಕಿನ ಮೇಲೂ ಪರಿಣಾಮ ಬೀರಿದೆ. ಲಾಕ್ಡೌನ್ನಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟರೂ ಮಕ್ಕಳ ವ್ಯಾಸಂಗಕ್ಕೆ ಅನುಕೂಲವಾಗಲಿ ಅಂತ ವಠಾರ ಶಾಲೆ ಆರಂಭಿಸಿದೆ. ಆದ್ರೆ ರಾಯಚೂರಿನಲ್ಲಿ ಗ್ರಾಮೀಣ ಭಾಗದ ಮಕ್ಕಳು ಮಾತ್ರ ವಠಾರ ಶಾಲೆಗಳಿಗೆ ಹೋಗದೆ ಕೂಲಿಗೆ ಹೋಗುತ್ತಿದ್ದಾರೆ. ಸರ್ಕಾರ ಇನ್ನೂ ಶಾಲೆಗಳಿಗೆ ಮಕ್ಕಳ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಅದರ ಬದಲಿಗೆ ಶಿಕ್ಷಕರೇ ಗ್ರಾಮದ ದೇವಸ್ಥಾನಗಳು, ಸಮುದಾಯ ಭವನಗಳು, ಗುಡಿ ಗುಂಡಾರಗಳಲ್ಲೇ ವಠಾರ ಶಾಲೆ ನಡೆಸಬೇಕಿದೆ. ಹೀಗೆ ಹೋದ ಶಿಕ್ಷಕರಿಗೆ ಅಲ್ಲಿ ಮಕ್ಕಳಿಲ್ಲದ್ದು ಕಂಡು ಬೇಸರವಾಗುತ್ತಿದೆ. ಬಹುತೇಕ ಮಕ್ಕಳನ್ನು ಪಾಲಕರು ಹೊಲಗಳ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇಲ್ಲವೇ ಬೇರೆಯವರ ಹೊಲಗಳಿಗೆ ಕಸ ಆರಿಸಲು ಕೂಲಿಗೆ ಕಳುಹಿಸುತ್ತಿರುವುದು ಹೆಚ್ಚಾಗಿದೆ.
ಪ್ರತಿ ದಿನ ಮಕ್ಕಳಿಗೆ 150 ರೂಪಾಯಿ ಕೂಲಿ ಸಿಗುತ್ತಿರುವುದರಿಂದ ಕಷ್ಟದ ಸಮಯದಲ್ಲಿ ಹಣ ಬರುತ್ತೆ ಅಂತ ಪೋಷಕರು ಕೃಷಿ ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದು ತಪ್ಪು ಎಂದು ಹೇಳಿದರೆ ಪಾಲಕರು ಶಿಕ್ಷಕರು, ಅಧಿಕಾರಿಗಳೊಂದಿಗೆ ವಾದಕ್ಕಿಳಿಯುತ್ತಾರಂತೆ. ಹೀಗಾಗಿ ಮಕ್ಕಳಿಗೆ ಪಾಠ ಹೇಳುವುದೇ ದೊಡ್ಡ ತಲೆನೋವಾಗಿದೆ. ವಿದ್ಯಾಗಮ ಯಶಸ್ವಿಯಾಗಿ ನಡೆಯುತ್ತಿದೆ ಆದ್ರೆ ಮಕ್ಕಳನ್ನ ಕೂಲಿ ಕೆಲಸಕ್ಕೆ ಕಳುಹಿಸುತ್ತಿರುವ ಪೋಷಕರಿಗೆ ತಿಳಿ ಹೇಳುವುದೇ ಸವಾಲಾಗಿದೆ. ಶಿಕ್ಷಕರು ಮನೆ ಮನೆಗೆ ತೆರಳಿ ಮಕ್ಕಳನ್ನ ಪಾಠಕ್ಕೆ ಕರೆತರುವ ಕೆಲಸ ಮಾಡುತ್ತಿದ್ದಾರೆ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ಗೋನಾಳ ಹೇಳಿದ್ದಾರೆ.
ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿಗಳು ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಬಾಲಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಕವಿತಾಳ, ಸಿರವಾರ, ದೇವದುರ್ಗದಲ್ಲಿ ದಾಳಿ ನಡೆಸಿದ್ದು, 28 ವಾಹನಗಳನ್ನು ಜಪ್ತಿ ಮಾಡಿ 130 ಮಕ್ಕಳನ್ನು ರಕ್ಷಿಸಿದ್ದಾರೆ. ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದು, ಪಾಲಕರಿಗೆ ಮನವರಿಕೆ ಮಾಡಿಕೊಡುವ ಯತ್ನ ಮಾಡಲಾಗುತ್ತಿದೆ. ರಕ್ಷಣೆ ಮಾಡಿದ ಬಾಲಕಾರ್ಮಿಕರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗುತ್ತಿದೆ.
ಟಂಟಂ ಆಟೋ ಚಾಲಕರು, ಪಿಕಪ್ ವಾಹನಗಳ ಚಾಲಕರು ಕೂಲಿ ಕಾರ್ಮಿಕರನ್ನು ಕರೆತರುವ ಕೆಲಸ ನೆಚ್ಚಿಕೊಂಡಿದ್ದಾರೆ. ಒಬ್ಬ ಕಾರ್ಮಿಕರಿಗೆ ಇಂತಿಷ್ಟು ಅಂತ ಕಮಿಶನ್ ಪಡೆಯುತ್ತಾರೆ. ಕಮಿಷನ್ಗಾಗಿ ಮಕ್ಕಳನ್ನು ಕೂಡ ಕೂಲಿಗೆ ಕರೆದೊಯ್ಯುತ್ತಿದ್ದಾರೆ. ನಿರಂತರ ದಾಳಿ ಬಳಿಕ ಅಧಿಕಾರಿಗಳು ಶಿಕ್ಷಕರೇ ಮಕ್ಕಳ ಮನೆಗಳಿಗೆ ತೆರಳಿ ವಠಾರ ಶಾಲೆಗೆ ಬರುವಂತೆ ತಿಳಿ ಹೇಳುವ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಶಿಕ್ಷಕರು ಪಾಠ ಮಾಡುವ ಜೊತೆ ಮಕ್ಕಳು ಕೂಲಿ ಕೆಲಸಕ್ಕೆ ಹೋಗದಂತೆ ತಡೆಯುವ ಕೆಲಸವೂ ಮಾಡಬೇಕಾಗಿದೆ.
