Bengaluru City
ಪೇಟ ತೊಟ್ಟು ಕತ್ತೆ ಮೇಲೆ ಬಂದ ವಾಟಾಳ್

ಬೆಂಗಳೂರು: ರೈತ ವಿರೋಧಿ ಮಸೂದೆಗಳ ವಿರುದ್ಧ ಇಂದು ಕರ್ನಾಟಕ ಬಂದ್ ಮಾಡಲಾಗಿದ್ದು, ರಾಜ್ಯದೆಲ್ಲೆಡೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇತ್ತ ಮೆಜೆಸ್ಟಿಕ್ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದ ಪ್ರತಿಭಟನೆ ಮಾಡಲಾಗಿದೆ.
ವಾಟಾಳ್ ನಾಗರಾಜ್ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ. ಮೆಜೆಸ್ಟಿಕ್ ಮುಂಭಾಗ ಪೇಟ ತೊಟ್ಟು ಕತ್ತೆಯ ಮೇಲೆ ಮೆರವಣಿಗೆ ಬರುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೇ ವಾಟಾಳ್ ಮಂಗಳವಾದ್ಯಗಳ ದೊಡ್ಡ ತಂಡದೊಂದಿಗೆ ಆಗಮಿಸಿದ್ದರು. ಇವರ ಜೊತೆಗೆ ಕನ್ನಡಪರ ಹೋರಾಟಗಾರರು ಭಾಗಿಯಾಗಿದ್ದರು.
ಮಂಗಳವಾದ್ಯಗಳ ಮಧ್ಯೆ ಕತ್ತೆಯ ಮೇಲೆ ಕುಳಿತುಕೊಂಡು ವಾಟಾಳ್ ನಾಗರಾಜ್ ಇಡೀ ಮೆಜೆಸ್ಟಿಕ್ ರೌಂಡ್ಸ್ ಹಾಕಿದ್ದಾರೆ. ಇದೇ ವೇಳೆ ಮಾತನಾಡಿದ ವಾಟಾಳ್, ಇದು ಒಂದು ಅಪರೂಪದ ಚಳುವಳಿ. ವಿಶ್ವದಲ್ಲೇ ಇಂತಹ ಚಳುವಳಿ ನಡೆದಿಲ್ಲ. ಕತ್ತೆಯ ಮೇಲೆ ಕುಳಿತುಕೊಂಡು ಮೆರವಣಿಗೆ ಮಾಡುವ ಮೂಲಕ ರಾಜ್ಯ ಸರ್ಕಾರದ ನೀತಿಯನ್ನ ವಿರೋಧಿಸುತ್ತಿದ್ದೇವೆ. ಇಂತಹ ಪ್ರತಿಭಟನೆ ನೂರು ವರ್ಷಗಳಾದರೂ ಬರುವುದಿಲ್ಲ ಎಂದರು.
ನಾವೆಲ್ಲರೂ ಪ್ರಾಮಾಣಿಕ ಕನ್ನಡ ಒಕ್ಕೂಟದ ಮುಖಂಡರು ಬಹಳ ನಿರಂತರವಾಗಿ ಹೋರಾಟ ಮಾಡಿದ್ದೇವೆ. ರೈತರಿಗಾಗಿ ನಾವು 50 ವರ್ಷಗಳಿಂದ ಹೋರಾಟ ಮಾಡಿದ್ದೇವೆ. ಇನ್ಮುಂದೆ ಮುಂದೇಯೂ ನಮ್ಮ ಉಸಿರು ಇರುವವರೆಗೂ ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
