ರಾಜ್ಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ – ಇಸ್ಕಾನ್‍ ನಲ್ಲಿ ವಿಶೇಷ ಪೂಜೆ ಪುನಸ್ಕಾರ

ಬೆಂಗಳೂರು: ಇಂದು ವೈಕುಂಠ ಏಕಾದಶಿ. ಈ ದಿನ ವೆಂಕಟೇಶ್ವರ ದರ್ಶನ ಮಾಡಿದರೆ ಮುಕ್ತಿ ಸಿಗುತ್ತೆ ಎನ್ನುವ ನಂಬಿಕೆ ಇದೆ. ಹೀಗಾಗಿ ಆಂಧ್ರ ಪ್ರದೇಶದ ತಿರುಪತಿ ಸೇರಿದಂತೆ ರಾಜ್ಯದ ವಿವಿಧ ವೆಂಕಟೇಶ್ವರನ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೀತಿದೆ.

ಭಕ್ತರು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇತ್ತ ಬೆಂಗಳೂರಿನ ಇಸ್ಕಾನ್‍ನಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ನಡಿಯುತ್ತಿದ್ದು, ಭಕ್ತ ಸಾಗರ ಸೇರುತ್ತಿದೆ.

ಬಳ್ಳಾರಿಯ ವೆಂಕಟೇಶ್ವರ ದೇವಾಲಯದಲ್ಲಿ ಭರ್ಜರಿ ಲಡ್ಡು ಮಾಡಲಾಗಿದೆ. ಭಕ್ತರಿಗೆ ಒಂದು ಲಕ್ಷ ಲಡ್ಡು ವಿತರಣೆ ಮಾಡಲಿದ್ದು, ಇದಕ್ಕಾಗಿ 550 ಕೆಜಿ ಕಡ್ಲೆಹಿಟ್ಟು, 900 ಕೆಜಿ ಸಕ್ಕರೆ, 30 ಕೆಜಿ ಗೊಡಂಬಿ ದಾಕ್ಷಿ, ಏಲಕ್ಕಿ ಬಳಸಿ ಲಕ್ಷ ಲಡ್ಡು ತಯಾರಿಸಲಾಗಿದೆ. ಕಳೆದ ಒಂದು ವಾರದಿಂದ 300 ಮಹಿಳೆಯರು ಲಡ್ಡು ಪ್ರಸಾದ ತಯಾರಿಕೆ ಮಾಡಿದ್ದು, ಇಂದು ದೇವರ ದರ್ಶನ ಪಡೆಯೋ ಭಕ್ತರಿಗೆ ಲಡ್ಡು ವಿತರಿಸಲಿದ್ದಾರೆ. ದಾವಣಗೆರೆ, ನೆಲಮಂಗಲದಲ್ಲೂ ಭಕ್ತರು ಬೆಳ್ಳಂಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ವೈಕುಂಠ ಏಕಾದಶಿ ವಿಶೇಷವಾಗಿ ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್ ನಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಕೊರೆಯುವ ಚಳಿಯನ್ನು ಲೆಕ್ಕಿಸದೆ ಬೆಳಿಗ್ಗೆ ನಾಲ್ಕು ಗಂಟೆಗಳಿಂದ ಸಾಲು ಸಾಲಾಗಿ ನಿಂತಿದ್ದು, ದೇವರ ದರ್ಶನ ಪಡೆದರು.

ವೆಂಕಟೇಶ್ವರನಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದೆ. ಭಕ್ತರಿಗಾಗಿ ದೇವಾಲಯಗಳಲ್ಲಿ ಸ್ವರ್ಗದ ಬಾಗಿಲು ತೆರೆದಿದ್ದು, ಬಾಗಿಲನ್ನು ಪ್ರವೇಶಿಸಿ ಭಕ್ತರು ಪುನೀತರಾದರು. ಅಲ್ಲದೇ ಉಪವಾಸವಿದ್ದು ದೇವರ ದರ್ಶನ ಪಡೆದು ಸ್ವರ್ಗದ ಬಾಗಿಲು ದರ್ಶನ ಪಡೆದರೆ ಸ್ವರ್ಗ ಪ್ರಾಪ್ತವಾಗುತ್ತೆ ಎನ್ನುವುದು ಭಕ್ತರ ನಂಬಿಕೆ.

Leave a Reply

Your email address will not be published. Required fields are marked *