Connect with us

Crime

7 ವರ್ಷದ ಮಗನನ್ನು ಕೊಂದು ರಾತ್ರಿಯಿಡೀ ಶವದ ಜೊತೆ ಮಲಗಿದ ತಂದೆ!

Published

on

– ಮರುದಿನ ಹೆಂಡತಿ ಬಳಿ ಕೊಲೆಯ ರಹಸ್ಯ ತಿಳಿಸಿದ

ಲಕ್ನೋ: ವ್ಯಕ್ತಿಯೊಬ್ಬ ತನ್ನ 7 ವರ್ಷದ ಮಗನನ್ನು ಕೊಂದು ನಂತರ ಆತನ ಶವದ ಜೊತೆ ರಾತ್ರಿಯಿಡೀ ಕಳೆದ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಆರೋಪಿ ತಂದೆಯನ್ನು ಅಲಂಕಾರ್ ಶ್ರೀವಾತ್ಸವ್ ಎಂದು ಗುರುತಿಸಲಾಗಿದೆ. ಈತ ಖಿನ್ನತೆಗೊಳಗಾಗಿ ಈ ಕೃತಯ ಎಸಗಿರುವುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀವಾತ್ಸವ್ ಕುಟುಂಬ ಕಾನ್ಪುರ ರೆಸಿಡೆನ್ಸಿಯಲ್ಲಿ ವಾಸವಾಗಿದ್ದು, ಪತ್ನಿ ಸಾರಿಕಾ ಸರ್ಕಾರಿ ಶಾಲೆಯ ಶಿಕ್ಷಕಿ. ಭಾನುವಾರ ಬೆಳಗ್ಗೆ ಎದ್ದ ಶ್ರೀವಾತ್ಸವ್ ನೇರವಾಗಿ ಪತ್ನಿ ಬಳಿ ಬಂದವನೇ, ರಾತ್ರಿ ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಪತಿ ಮಾತಿನಿಂದ ಶಾಕ್ ಗೊಳಗಾದ ಪತ್ನಿ ಕೂಡಲೇ ನೆರೆಮನೆಯವರನ್ನು ಹಾಗೂ ಸಂಬಂಧಿಕರನ್ನು ಸ್ಥಳಕ್ಕೆ ಕರೆದಿದ್ದಾರೆ. ಅಲ್ಲದೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.

ಪತಿ ಶನಿವಾರ ರಾತ್ರಿ ತಮ್ಮ ಮಗನನ್ನು ಕೊಂದು ಶವದೊಂದಿಗೆ ರಾತ್ರಿಯಿಡೀ ಡ್ರಾಯಿಂಗ್ ರೂಂನಲ್ಲಿ ಮಲಗಿದ್ದಾನೆ. ಮರುದಿನ ಬೆಳಗ್ಗೆ ತಾನು ಮಲಗಿದ್ದಲ್ಲಿಗೆ ಬಂದು ಮಗನನ್ನು ಕೊಂದನೆಂದು ಹೇಳಿದನು ಎಂದು ಸಾರಿಕಾ ಹೇಳಿದ್ದಾರೆ. ಘಟನೆಯಿಂದ ಕುಟುಂಬ ಸದಸ್ಯರು ಇನ್ನೂ ಆಘಾತದಲ್ಲಿದ್ದಾರೆ. ಅವರ ಹೇಳಿಕೆಯನ್ನು ನಾವು ಇನ್ನೂ ದಾಖಲಿಸಿಕೊಂಡಿಲ್ಲ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಅಲಂಕರ್ ಕೆಲಸ ಕಳೆದುಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಆತ ಖಿನ್ನತೆಗೆ ಒಳಗಾಗಿದ್ದನು. ಸದ್ಯ ಸಾರಿಕಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಶ್ರೀವಾತ್ಸವ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇತ್ತ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Click to comment

Leave a Reply

Your email address will not be published. Required fields are marked *

www.publictv.in